ಮೈಸೂರು:ತೋಟಗಾರಿಕಾ ಇಲಾಖೆಗೆ ಅನುದಾನ ತರಲು ಮುಖ್ಯಮಂತ್ರಿಗೆ ಬೆಣ್ಣೆ ''ಹೊಡಿಯಬೇಕು'' ಎಂಬ ತಮ್ಮ ವಿಡಿಯೋ ವೈರಲ್ ಬಗ್ಗೆ ಕೆ.ಸಿ. ನಾರಾಯಣ ಗೌಡ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರು ಈ ವೈರಲ್ ಆದ ವಿಡಿಯೋ ಸುಳ್ಳು, ಇದನ್ನು ಯಾವ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಸಿಲ್ಕ್ ಬೋರ್ಡ್ ಮೀಟಿಂಗ್ ಸಂದರ್ಭದಲ್ಲಿ ಸ್ಥಳೀಯ ಜನರು ಬಂದಿದ್ದರು. ಅಲ್ಲಿ ಸಿಲ್ಕ್ ಬೋರ್ಡ್ ಅಭಿವೃದ್ಧಿ ಅನುದಾನದ ಬಗ್ಗೆ ಮಾತನಾಡಿದ್ದೇನೆ. ಆದರೆ ಅನುದಾನ ತರಲು ಸಿಎಂಗೆ ಬೆಣ್ಣೆ ಹೊಡಿಯಬೇಕು(ಹಚ್ಚಬೇಕು) ಎಂಬ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಂತರ ಮಾತನಾಡಿದ ಅವರು ಮಂಡ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಬಿಜೆಪಿ ಅಕೌಂಟ್ ಓಪನ್ ಆಗಿದೆ. ಜೊತೆಗೆ ಮಂಡ್ಯ ಜಿಲ್ಲೆಗೆ ನನ್ನನ್ನು ಮಂತ್ರಿ ಮಾಡಿದ್ದಾರೆ. ಮೂರು ಖಾತೆ ಕೊಟ್ಟಿದ್ದಾರೆ. ಅದನ್ನು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಮುಖ್ಯಮಂತ್ರಿಗಳು ನಮ್ಮ ತಾಲೂಕಿನವರಾಗಿದ್ದರಿಂದ ಬಿಜೆಪಿಗೆ ಸೇರಿದ್ದೇನೆ ಎಂದರು.
ಸಿಎಂಗೆ ಬೆಣ್ಣೆ ಹಚ್ಚಿ ಅನುದಾನ ಕೇಳಬೇಕು: ಸಚಿವ ನಾರಾಯಣ ಗೌಡ
ಮಂಡ್ಯ ಜಿಲ್ಲೆಯ ಎಲ್ಲಾ ಕೆಲಸಗಳಿಗೂ ಮುಖ್ಯಮಂತ್ರಿಯವರ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಕೂಡ ಸುಳ್ಳು. ಅವರು ಚುನಾವಣೆ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದರು, ಅದನ್ನು ಬಿಟ್ಟರೆ ಬೇರೇನೂ ಇಲ್ಲ. ಇದೆಲ್ಲವನ್ನು ಬೇರೆ ಪಕ್ಷದವರು ಮಾಡಿಸುತ್ತಿದ್ದಾರೆ. ಇಂತಹ ಕಿಡಿಗೇಡಿ ಕೃತ್ಯಗಳಿಗೆ ಹೆದರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಆರರಿಂದ ಏಳು ಸ್ಥಾನ ಗೆಲ್ಲುತ್ತದೆ ಎಂದು ಸಚಿವ ನಾರಾಯಣ ಗೌಡ ವಿಶ್ವಾಸ ವ್ಯಕ್ತಪಡಿಸಿದರು.