ಮೈಸೂರು: ಜೆಡಿಎಸ್ ಎಂಬ ಮಗು ಮಿಠಾಯಿ ತೋರಿಸಿದವರ ಕಡೆಗೆ ಹೋಗುತ್ತದೆ. ಪಾಪ ಅವರ ಬಗ್ಗೆ ಏನು ಮಾತನಾಡುವುದು, ಬಿಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದರು.
ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್ ನಡೆಯ ಕುರಿತು ಮಾತನಾಡಿದ ಅವರು, ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಅದು ಮಿಠಾಯಿ ತೋರಿಸಿದವರ ಕಡೆಗೆ ಹೋಗುತ್ತದೆ ಎಂದರು.
ಜೆಡಿಎಸ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ಪರಿಷತ್‌ನಲ್ಲಿ ಸದಸ್ಯರ ಗಲಾಟೆ ವಿಚಾರದ ಕುರಿತು ಮಾತನಾಡಿ, ಸಾರ್ವಭೌಮತ್ವದ ಹೆಬ್ಬಾಗಿಲು ಪಾರ್ಲಿಮೆಂಟ್‌ಗೆ ಮೋದಿ ನಮಸ್ಕರಿಸುತ್ತಾರೆ. ಅಂತಹ ಸಾರ್ವಭೌಮತ್ವದ ಸದನದ ಬಾಗಿಲನ್ನು ಬೂಟು ಕಾಲಿನಲ್ಲಿ ಒದ್ದಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ದೊಡ್ಡ ದೊಡ್ಡ ವ್ಯಕ್ತಿಗಳೇ ಅಗೌರವ ತೋರಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಇನ್ನು ಪ್ರತಾಪ್ ಚಂದ್ರಶೆಟ್ಟಿ ನಾನು ತುಂಬಾ ವರ್ಷಗಳ ಸ್ನೇಹಿತರು, ಅವರು ಬಹಳ ಸ್ವಾಭಿಮಾನಿ ವ್ಯಕ್ತಿ. ಒಂದು ತಿಂಗಳ ಹಿಂದೆಯೇ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿದ್ರು. ಪರೋಕ್ಷವಾಗಿ ಕಾಂಗ್ರೆಸ್ನವರು ಗೂಂಡಾಗಿರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಕುಟುಕಿದರು.