ಮೈಸೂರು: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಅಂಬಾವಿಲಾಸ ಅರಮನೆಯ ಯೋಗ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಅರಮನೆಯ ಮುಂಭಾಗ ನಡೆಯಲಿರುವ ಯೋಗ ದಿನದ ವೇದಿಕೆಯಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಭಾಗವಹಿಸಲಿದ್ದು, ಸುಮಾರು 51 ವಿವಿಧ ವರ್ಗದ ಜನರೂ ಪಾಲ್ಗೊಳ್ಳಲಿದ್ದಾರೆ.
10 ಸಾವಿರಕ್ಕೂ ಹೆಚ್ಚು ಮಂದಿಗೆ ಅವಕಾಶ: "ಈಗಾಗಲೇ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿರುವ ಜನರು ಪ್ರಧಾನಿಯೊಂದಿಗೆ ಯೋಗ ಮಾಡುವರು. ಈ ನಿಟ್ಟಿನಲ್ಲಿ ಅರಮನೆ ಮುಂಭಾಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅರಮನೆಯ ನಾಲ್ಕು ದ್ವಾರಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 5:30 ರ ಒಳಗೆ ಅರಮನೆಯೊಳಗೆ ಯೋಗ ಮಾಡುವವರು ಬರಬೇಕು, ಅನಂತರ ನಾಲ್ಕು ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. 10,000ಕ್ಕೂ ಹೆಚ್ಚು ಮಂದಿ ಯೋಗ ಮಾಡಲು ವೇದಿಕೆ ಮಾಡಲಾಗಿದೆ" ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.