ಮೈಸೂರು: 17 ತಿಂಗಳ ಹೆಣ್ಣು ಮಗು ತನ್ನ ಅಗಾಧ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದೆ. ಚಿಕ್ಕ ವಯಸ್ಸಿನಲ್ಲೇ ಈ ವಿಶಿಷ್ಟ ದಾಖಲೆ ಮಾಡಿದ್ದಾಳೆ ಮೈಸೂರಿನ ಪುಟಾಣಿ ಚವಿಷ್ಕ.
ಮೈಸೂರಿನ ರಾಮಕೃಷ್ಣ ನಗರದ ನಿವಾಸಿಗಳಾದ ಬಾಲಚಂದರ್ ಮತ್ತು ವಿಪಾಂಚಿ ದಂಪತಿಗಳ ಪುತ್ರಿ ಚವಿಷ್ಕ ಬಿ. ನಾರಾಯಣ್ ಚಿಕ್ಕ ವಯಸ್ಸಿನಲ್ಲೇ ಈ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಜನವರಿ 27ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ -2022 ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಈ ಪುಟಾಣಿಯ ಹೆಸರಿದೆ.
ಸಾಮಾನ್ಯವಾಗಿ 17 ತಿಂಗಳು ಅಂದರೆ ಒಂದೂವರೆ ವರ್ಷದ ಮಕ್ಕಳು ತೊದಲು ನುಡಿಯಲ್ಲಿ ಮಾತನಾಡಲು ಶುರು ಮಾಡುತ್ತವೆ ಮತ್ತು ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಇರುವುದಿಲ್ಲ. ಎಲ್ಲವನ್ನೂ ಗುರುತಿಸಲು ಸಾಧ್ಯವಿಲ್ಲ. ಆದರೆ, ಈ ಮಗು ಹಲವಾರು ವಸ್ತುಗಳ, ಪ್ರಾಣಿ ಪಕ್ಷಿಗಳ ಹೆಸರನ್ನು ಹೇಳಿದ ತಕ್ಷಣ ಗುರುತಿಸುವ ಪ್ರತಿಭೆ ಹೊಂದಿದ್ದಾಳೆ.
ಮಗುವಿನ ಪ್ರತಿಭೆ:30 ಪ್ರಾಣಿ ಪಕ್ಷಿಗಳು, 25 ವಸ್ತುಗಳು, ದೇಹದ 25 ಭಾಗಗಳು, 15 ತರಕಾರಿಗಳು, 8 ಹಣ್ಣುಗಳು, 10 ವಾಹನಗಳು, 5 ಆಕಾರಗಳನ್ನು ಗೊಂದಲಕ್ಕೊಳಗಾಗದೇ ಸುಲಭವಾಗಿ ಗುರುತಿಸುತ್ತಾಳೆ.
ಕಾಡು ಪ್ರಾಣಿಗಳನ್ನು ಗುರುತಿಸಿಸಲು 2 ನಿಮಿಷ, ದೇಹದ ನಾನಾ ಭಾಗಗಳನ್ನು ತೋರಿಸಲು 1.47 ನಿಮಿಷ, ವಸ್ತುಗಳನ್ನು ತೋರಿಸಲು 1.33 ನಿಮಿಷ, ತರಕಾರಿಗಳನ್ನು ಗುರುತಿಸಲು 1.55 ನಿಮಿಷ, ವಿವಿಧ ಆಕಾರಗಳನ್ನು ಗುರುತಿಸಲು 1.28 ನಿಮಿಷಗಳನ್ನು ತೆಗೆದುಕೊಂಡಿದ್ದಾಳೆ. ಇದನ್ನೆಲ್ಲ ವಿಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಮಗುವಿನ ಪೋಷಕರು ಕಳುಹಿಸಿದ್ದಾರೆ.