ಮೈಸೂರು :ಜೆಡಿಎಸ್ ಹಾಳಾಗಲಿ ಎಂದು ನಾನು ಯಾವತ್ತೂ ಹೇಳಿಲ್ಲ. ಜೆಡಿಎಸ್ ಪಕ್ಷ ಉಳಿಯಬೇಕೆಂಬುದು ನನ್ನ ಬಯಕೆ. ಅವರು ಯಾವ ದಿಕ್ಕಿನಲ್ಲಿ ಹೋಗ್ತಿದ್ದಾರೋ, ಅದೇ ದಿಕ್ಕಿನಲ್ಲಿ ಹೋಗಿ ಪಕ್ಷ ಉಳಿಸಲಿ ಎಂದು ಶಾಸಕ ಜಿ.ಟಿ.ದೇವೇಗೌಡರು ಅವರು ಸಾ.ರಾ.ಮಹೇಶ್ಗೆ ತಿರುಗೇಟು ನೀಡಿದ್ದಾರೆ.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಾನು ಜೊತೆಯಲಿದ್ದು ಮೋಸ ಮಾಡಿದ್ರೆ ತಾಯಿಗೆ ಮೋಸ ಮಾಡಿದಂತೆ. ನಾನು ಎರಡು ವರ್ಷಗಳಿಂದ ದೂರ ಉಳಿದಿದ್ದೆ. ಹೀಗಾಗಿ, ಉತ್ತರ ಕೊಡಲು ನಾನೇನು ಚುನಾವಣೆಗೆ ನಿಂತಿರಲಿಲ್ಲ ಎಂದು ಕುಟುಕಿದ್ದಾರೆ.
ನಾನು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದೆ. ಪರಿಷತ್ ಫಲಿತಾಂಶದಿಂದ ನನ್ನ ವರ್ಚಸ್ಸಿಗೇನು ಧಕ್ಕೆ ಇಲ್ಲ. ನಾನು ಇಡೀ ಜಿಲ್ಲೆಗೆ ಹೋಗಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಸಂದೇಶ್ ನಾಗರಾಜ್ ಪರವಾಗಿ ಇಡೀ ಜಿಲ್ಲೆಗೆ ಹೋಗಿ ಪ್ರಚಾರ ಮಾಡಿದ್ದೆ.
ಆದರೆ, ಈ ಬಾರಿ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಕ್ಕಷ್ಟೇ ಹೋಗಿದ್ದೆ. ಮತದಾರರ ತೀರ್ಪಿಗೆ ನಾವೆಲ್ಲಾ ತಲೆಬಾಗಬೇಕಾಗುತ್ತೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೇನೆ. ಪರಿಷತ್ ಫಲಿತಾಂಶದಿಂದ ಸಾ.ರಾ.ಮಹೇಶ್ಗೆ ಶಕ್ತಿ, ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಹಾಗೇ ಉಳಿಸಿಕೊಂಡು ಹೋಗಲಿ ಎಂದು ವ್ಯಂಗ್ಯವಾಡಿದರು.