ಮೈಸೂರು: ಯಾವುದು ನಮ್ಮ ಖಾಸಗಿ ಆಸ್ತಿ, ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಾರೆ ಎಂಬುದು ಮಾತ್ರ ಗೊತ್ತಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಅರಮನೆಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಪ್ರಮೋದಾದೇವಿ ಒಡೆಯರ್, ರಾಜ್ಯ ವಿಲೀನ ಮಾಡುವ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ರಾಜ ಮನೆತನದ ಖಾಸಗಿ ಆಸ್ತಿಗಳನ್ನು ಘೋಷಣೆ ಮಾಡಿ, ಉಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಲಾಯಿತು. ಈ ಸಂಬಂಧ 1950 ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ 1951 ರಲ್ಲಿ ರಾಜಮನೆತನದ ಖಾಸಗಿ ಆಸ್ತಿಗಳನ್ನು ಪಟ್ಟಿಮಾಡಿ, ಈ ಆಸ್ತಿಗಳು ರಾಜ ವಂಶಸ್ಥರಿಗೆ ಸೇರಿದವು ಎಂದು ಸರ್ಕಾರಿ ಆದೇಶ ಹೊರಡಿಸಲಾಗಿತ್ತು.
ಈ ಆದೇಶ ಸರ್ಕಾರಿ ದಾಖಲೆಗಳಲ್ಲೂ ಇದೆ. ಇದರಲ್ಲಿ ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವವರಿಗೆ ಗೊತ್ತು. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ರಾಜ ವಂಶಸ್ಥರಿಗೆ ಯಾವುದೇ ಸಂಸ್ಥೆ ಇಲ್ಲ. ಇಲ್ಲಿ ಮಾತ್ರ ಮೈಸೂರು ಅರಮನೆ, ಬೆಂಗಳೂರು ಅರಮನೆ ಸೇರಿದಂತೆ ಇತರೇ ರಾಜ ವಂಶಸ್ಥರ ಆಸ್ತಿಗಳ ಬಗ್ಗೆ ಪ್ರಕರಣಗಳು ಇವೆ. ಈ ಮೂಲಕ ಯಾಕಿಷ್ಟು ನಮಗೆ ಹಿಂಸೆ ಕೊಡುತ್ತಿದ್ದಾರೆ ಗೊತ್ತಿಲ್ಲ ಎಂದು ರಾಜಮಾತೆ ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.