ಮೈಸೂರು: ಹಕ್ಕಿಜ್ವರ ಸೀಮಿತ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದೆ. ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡದಂತೆ ನಾನು ಹೇಳಿಲ್ಲ. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಕೋಳಿ ಮಾಂಸ, ಮೊಟ್ಟೆ ತಿನ್ನಬೇಡಿ ಎಂದು ನಾನು ಹೇಳಿಲ್ಲ: ಮೈಸೂರು ಡಿಸಿ ಸ್ಪಷ್ಟನೆ
ಹಕ್ಕಿಜ್ವರ ಕಾಣಿಸಿಕೊಂಡಿರುವ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಅಲರ್ಟ್ ಘೋಷಿಸಲಾಗಿದೆ. ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡದಂತೆ ನಾನು ಹೇಳಿಲ್ಲ. ಹಕ್ಕಿಜ್ವರ ಸೀಮಿತ ಪ್ರದೇಶದಲ್ಲಿ ಮಾತ್ರ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದೆ. ಆದರೆ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಕುಂಬಾರಕೊಪ್ಪಲಿನಲ್ಲಿ ಕೋಳಿ ಹಾಗೂ ಪಕ್ಷಿಯೊಂದರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಮಾತ್ರ ಪಕ್ಷಿಗಳು ಹಾಗೂ ಕೋಳಿಗಳನ್ನು ಗುರುತು ಮಾಡಿ ಕಿಲ್ಲಿಂಗ್ ಆಪರೇಷನ್ ಮಾಡಲು ಸೂಚನೆ ನೀಡಲಾಗಿತ್ತು. ಬೇರೆ ಬೇರೆ ಜಿಲ್ಲೆಯಲ್ಲಿ ಹಕ್ಕಿಜ್ವರ ಎಂದು ಹೇಳಿ ಮಾಂಸ ಹಾಗೂ ಮೊಟ್ಟೆ ತಿನ್ನಲು ನಿರ್ಬಂಧ ಹೇರಿರುವುದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರಿಂದ ನ್ಯಾಷನಲ್ ಎಗ್ ಕೌನ್ಸಿಲ್ ನಿಯೋಗ ನನ್ನನ್ನು ಬುಧವಾರ ಭೇಟಿ ಮಾಡಿ ಮನವಿ ಮಾಡಿದೆ ಎಂದರು.
ಹಕ್ಕಿಜ್ವರ ಕಾಣಿಸಿಕೊಂಡ ವ್ಯಾಪ್ತಿಯಲ್ಲಿ ಮಾತ್ರ ಪಕ್ಷಿಗಳಿಗೆ ಸಮಸ್ಯೆ ಎದುರಾಗುವುದು. ಆದರೆ, ಬೇರೆ ಕಡೆ ಸಮಸ್ಯೆ ಎದುರಾಗುವುದಿಲ್ಲ. ತಪ್ಪು ಗ್ರಹಿಕೆಯಿಂದ ಕೋಳಿ ಉದ್ಯಮದ ಮೇಲೆ ಹೊಡೆತ ಬೀಳುತ್ತದೆ ಎಂದು ಹೇಳಿದರು.