ಮೈಸೂರು: ಯಾವುದೇ ರಾಜಕೀಯ ಉದ್ದೇಶದಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲವೆಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಭೇಟಿಗೆ ಕಾರಣ ತಿಳಿಸಿದ್ರು ಜಿ.ಟಿ. ದೇವೇಗೌಡ - ರಾಜಕೀಯ ಉದ್ದೇಶದಿಂದ ಸಿಎಂ ಭೇಟಿಯಾಗಿಲ್ಲ ಎಂದು ಜಿ.ಟಿ. ದೇವೇಗೌಡ ಸ್ಪಷ್ಟನೆ
ಇಂದು ಸಿಎಂ ಯಡಿಯೂರಪ್ಪ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರನ್ನು ಭೇಟಿಯಾಗಿದ್ಧರು. ಈ ಭೇಟಿ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.
ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಚಾಮುಂಡೇಶ್ವರಿ ಬೆಟ್ಟ ಬರುವುದರಿಂದ ಈ ಕ್ಷೇತ್ರದ ಶಾಸಕನಾಗಿ ಅವರನ್ನು ಸ್ವಾಗತಿಸಲು ಬಂದಿದ್ದೀನಿ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದರು. ಯಡಿಯೂರಪ್ಪ ಅವರು ಹಿಂದೆ ಸಿಎಂ ಆಗಿದ್ದಾಗಲೂ ಉತ್ತರ ಕರ್ನಾಟಕದಲ್ಲಿ ನೆರೆ ಉಂಟಾಗಿತ್ತು. ಆಗ ನಾನು ಗೃಹಮಂಡಳಿ ಅಧ್ಯಕ್ಷನಾಗಿದ್ದೆ. ಅಲ್ಲಿ ಗೃಹಮಂಡಳಿಯಿಂದ ಮನೆ ಕಟ್ಟಿಕೊಡಲಾಯಿತು ಎಂದು ಈ ವೇಳೆ ನೆನಪು ಮಾಡಿಕೊಂಡರು.
ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿ.ಟಿ.ಡಿಯವರು, ಮಧ್ಯಂತರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿದರು. ಇನ್ನು ದಸರಾ ಕೆಲಸಗಳು ಕುಂಠಿತವಾಗಿಲ್ಲ. ಸಿದ್ಧತೆಗಳು ನಡೆಯುತ್ತಿವೆ. ಮುಂದೆ ಹಂತ ಹಂತವಾಗಿ ಕಾರ್ಯ ಚುರುಕಾಗಲಿದೆ ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ತಿಳಿಸಿದರು.