ಮೈಸೂರು: ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠ ಆರಂಭಿಸದಂತೆ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೀನಿ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಈ ಕುರಿತು ಪತ್ರ ಬರೆಯುತ್ತೇನೆ. ಕೊರೊನಾ ಜೊತೆ ಶಿಕ್ಷಣ ವ್ಯವಸ್ಥೆ ಹೇಗೆ ಇರಬೇಕು ಎಂಬುವುದರ ಬಗ್ಗೆ ಬರೆಯುತ್ತೇನೆ. ನಾನು ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೀನಿ, ನನ್ನ ಅನುಭವ ಹಂಚಿಕೊಳ್ಳುತ್ತೀನಿ ಎಂದರು.
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆ ತೆರೆಯಲು ಅವಸರ ಬೇಡ ಹಾಗೂ ಆನ್ ಲೈನ್ ನಲ್ಲಿ ಪಾಠ ಮಾಡುವುದೂ ಬೇಡ. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶಾಲೆ ತೆರೆದರೆ ಪ್ರತಿ ಮಗುವಿಗೆ ಕೋವಿಡ್ ಟೆಸ್ಟ್ ಆಗಬೇಕು. ಒಂದು ಮಗುವಿಗೆ ಬಂದರೆ, ಉಳಿದ ಮಕ್ಕಳಿಗೂ ಬರಲಿದೆ. ಅಲ್ಲದೇ ಕುಟುಂಬ, ಶಾಲೆಯನ್ನು ಸಹ ಕ್ವಾರಂಟೈನ್ ಮಾಡಬೇಕಾಗುತ್ತದೆ. ವರ್ಷದಲ್ಲಿ 222 ದಿನ ಶಾಲೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ 200 ದಿನ ಶಾಲೆ ನಡೆದರೆ ತೊಂದರೆ ಇಲ್ಲ ಎಂದು ಹೇಳಿದರು.