ಮೈಸೂರು: ಪ್ರೀತಿಸಿ ವಿವಾಹವಾದ ದಂಪತಿ ನಡುವೆ ವಿರಸ ಉಂಟಾಗಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಾಸಿಂ ಶಕ್ತಿ ನಗರ ನಿವಾಸಿ ಮೊಹಮದ್ ವಾಸಿಂ (24) ಆತ್ಮಹತ್ಯೆ ಮಾಡಿಕೊಂಡ ಪತಿ.
ಪ್ರೀತಿಸಿ ವಿವಾಹವಾದ ದಂಪತಿ ನಡುವೆ ವಿರಸ: ಪತಿ ನೇಣಿಗೆ ಶರಣು - husband committed suicide in mysore
ಮೂರು ವರ್ಷಗಳ ಹಿಂದೆ ಮನೆಯವರ ವಿರೋಧವನ್ನು ಲೆಕ್ಕಿಸದೇ ವಿವಾಹವಾದ ದಂಪತಿ ನಡುವೆ ವಿರಸ ಉಂಟಾಗಿ, ಇದೀಗ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.
ಈತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ಮನೆಯವರ ವಿರೋಧವನ್ನು ಲೆಕ್ಕಿಸದೇ ಶಾಂತಿನಗರದ ಶಬಾನಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಮನೆಯವರ ವಿರೋಧವಿದ್ದ ಹಿನ್ನೆಲೆ ವಿವಾಹದ ನಂತರ ಎನ್.ಆರ್.ಮೊಹಲ್ಲದಲ್ಲಿ ದಂಪತಿ ವಾಸವಾಗಿದ್ದರು.
ಕುಡಿತಕ್ಕೆ ದಾಸನಾಗಿದ್ದ ಮೊಹಮದ್ ವಾಸಿಂ ಆಗಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಚಾರದ ಕುರಿತು ದಂಪತಿ ನಡುವೆ ಜಗಳವಾಗುತ್ತಿತ್ತು. ಅಲ್ಲದೇ ಲಾಕ್ಡೌನ್ ವೇಳೆ ಆದಾಯವಿಲ್ಲದೇ ಆರ್ಥಿಕ ಬಿಕ್ಕಟ್ಟು ಎದುರಿಸಿದ್ದ ವಾಸಿಂ, ಇವೆಲ್ಲಾ ಬೆಳವಣಿಗೆಗಳಿಂದ ಮನನೊಂದು ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.