ಮೈಸೂರು: ಹಿಜಾಬ್ ವಿವಾದದ ಕುರಿತ ಹೈಕೋರ್ಟ್ ತೀರ್ಪು ಸ್ವಾಗತಾರ್ಹ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದ್ದಾರೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಕಾಲೇಜು ತರಗತಿಗಳಲ್ಲಿ ಹಿಜಾಬ್ ನಿರ್ಬಂಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.
ಹಿಜಾಬ್ ಕುರಿತಂತೆ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಇವರು, ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆ ಅಲ್ಲ. ಅಂತೆಯೇ ಹಿಜಾಬ್ ಅಗತ್ಯ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನಲ್ಲಿ ಯಾವುದೇ ಆಧಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಋತುರಾಜ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸ ಮೊಹಿಯುದ್ದಿನ್ ಖಾಜಿ ಅವರನ್ನು ಒಳಗೊಂಡ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು, ಇದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ದಾರೆ.
ವಸುದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿ, ಎಲ್ಲರೂ ನಮ್ಮವರೇ ನಾವೆಲ್ಲರೂ ಒಂದೇ ಕುಟುಂಬದ ರೀತಿಯಲ್ಲಿ ದೇಶದಲ್ಲಿ ಬಾಳುತ್ತಿದ್ದು, ಕೆಲವು ಸಮಾಜಘಾತುಕ ಶಕ್ತಿಗಳು ಹಿಜಾಬ್ ವಿಷಯವನ್ನು ರಾಜಕೀಯಗೊಳಿಸಿ ಇದರ ಲಾಭ ಪಡೆಯಲು ಯತ್ನಿಸುತ್ತಿದೆ. 'ನಹೀ ಜ್ಞಾನೇನ ಸದೃಶಂ' ಎಂಬ ಮಾತಿದೆ ಅದೇ ರೀತಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಮುಖ್ಯ ಉದ್ದೇಶವೇ ಜ್ಞಾನಾರ್ಜನೆಯಾಗಿದೆ. ಅಲ್ಲಿ ವಿದ್ಯಾರ್ಥಿಗಳ ಲಕ್ಷ್ಯ ಜ್ಞಾನಾರ್ಜನೆಯ ಜಡೆಗೆ ಇರಬೇಕೇ ಹೊರತು ಬೇರಾವುದಕ್ಕಲ್ಲ.
ವಿದ್ಯೆಯನ್ನು ಕಲಿತರೆ ಪ್ರಪಂಚದ ಯಾವ ಮೂಲೆಯಲ್ಲಾದರೂ ಬದುಕಬಹುದು. ಈಗ ಬಂದಿರುವ ಹೈಕೋರ್ಟ್ ತೀರ್ಪನ್ನು ಪಾಲಿಸಿಕೊಂಡು ಹೋಗುವುದು ಭಾರತೀಯನ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಕೊಟ್ಟು ಜ್ಞಾನಾರ್ಜನೆಯಲ್ಲಿ ತೊಡಗಬೇಕಾಗಿದೆ. ಯಾವುದೇ ಒಂದು ವರ್ಗ, ಇದನ್ನು ಸಂಭ್ರಮಿಸುವುದಾಗಲಿ ಅಥವಾ ವಿರೋಧ ಮಾಡುವುದಾಗಲೀ ಮಾಡುವುದನ್ನು ಬಿಟ್ಟು ಸಾಮಾಜಿಕ ಸ್ವಾಸ್ಥ್ಯ, ಸಾಮರಸ್ಯದ ಕಡೆ ಹೆಜ್ಜೆ ಇಡೋಣ ಎಂದು ಕರೆ ನೀಡಿದ್ದಾರೆ.
ಓದಿ :ಚಿರತೆ ಸಾವು, 9 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ ಸೇರಿದಂತೆ ಚಾಮರಾಜನಗರದ ಇಂದಿನ ಕ್ರೈಂ ನ್ಯೂಸ್