ಬೆಂಗಳೂರು :ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದ್ದರೂ ಕೋರ್ಟ್‌ಗೆ ಹಾಜರಾಗದ ಮೈಸೂರು ಪಾಲಿಕೆ ಆಯುಕ್ತ ಹಾಗೂ ವಲಯ ಆಯುಕ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಅಧಿಕಾರಿಗಳನ್ನು ಬಂಧಿಸಲು ಪೊಲೀಸರಿಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ರಸ್ತೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೋರೇಟರ್ ಪಿ. ಶ್ರೀಕಂಠಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು. ಈ ವೇಳೆ ಮೈಸೂರು ಪಾಲಿಕೆ ಪರ ವಕೀಲರು, ಅಧಿಕಾರಿಗಳ ಗೈರು ಹಾಜರಿಗೆ ಕ್ಷಮೆ ಕೋರಿ, ಅವರು ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದರು.ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೀಠ, ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಅಧಿಕಾರಿಗಳು ಕೋರ್ಟ್‌ಗೆ ಹಾಜರಾಗಿಲ್ಲ. ಮತ್ತೊಂದೆಡೆ ಕೋರ್ಟ್ ಆದೇಶವನ್ನೂ ಪಾಲಿಸಿಲ್ಲ. ಸರ್ಕಾರಿ ಅಧಿಕಾರಿಗಳ ಇಂತಹ ದುರ್ವತನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಕೋರ್ಟ್ ಆದೇಶ ಪಾಲಿಸದಿದ್ದರೆ, ಪಾಲಿಸುವಂತೆ ಮಾಡುವುದು ಹೇಗೆ ಎಂಬುದು ನಮಗೆ ತಿಳಿದಿದೆ. ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ್ದರೂ ಅಧಿಕಾರಿಗಳು ಬರಲಿಲ್ಲ. ಹೀಗಾಗಿ, ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದರೆ ಸರಿಹೋಗುತ್ತದೆ ಎಂದಿತು.
ಇದನ್ನೂ ಓದಿರಿ:5,000 ಕಿ.ಮೀ.ಗಳ ಸ್ಟ್ರೈಕ್ ವ್ಯಾಪ್ತಿ ಹೊಂದಿದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಉಡಾವಣೆ ಯಶಸ್ವಿ
ಪಾಲಿಕೆ ಪರ ವಕೀಲರು ಮನವಿ ಮಾಡಿ, ಪ್ರಕರಣದ ವಿಚಾರಣೆ ನಿಗದಿ ಬಗ್ಗೆ ಸರಿಯಾದ ಮಾಹಿತಿ ಸಿಗದಿದ್ದರಿಂದ ಅಧಿಕಾರಿಗಳು ಹಾಜರಾಗಲಿಲ್ಲ. ನ್ಯಾಯಾಲಯ ಒಂದು ಅವಕಾಶ ನೀಡಿದರೆ ತಪ್ಪದೇ ಮೈಸೂರು ಪಾಲಿಕೆ ಆಯುಕ್ತರು ಹಾಗೂ ವಲಯ ಆಯುಕ್ತರು ಕೋರ್ಟ್‌ಗೆ ಹಾಜರಾಗುತ್ತಾರೆ ಎಂದು ಭರವಸೆ ನೀಡಿದರು. ಇದರಿಂದ ಕಠಿಣ ಆದೇಶ ಹೊರಡಿಸುವ ನಿರ್ಧಾರದಿಂದ ಹಿಂದೆ ಸರಿದ ಪೀಠ, ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು. ಇದೇ ವೇಳೆ ಅಧಿಕಾರಿಗಳಿಬ್ಬರೂ ಕೋರ್ಟ್ ಎದುರು ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.
ಪ್ರಕರಣವೇನು?ಮೈಸೂರಿನ ರಸ್ತೆಗಳ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮತ್ತು ವಲಯ ಆಯುಕ್ತರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್ 2021ರ ಜೂನ್ 25ರಂದು ಆದೇಶಿಸಿತ್ತು. ನಂತರವೂ ಆಯುಕ್ತರು ಮತ್ತು ವಲಯ ಆಯುಕ್ತರ ಪರ ವಕೀಲರು ಮೂರ್ನಾಲ್ಕು ಬಾರಿ ಕಾಲಾವಕಾಶ ಪಡೆದುಕೊಂಡಿದ್ದರು. ಪದೇ ಪದೇ ಕಾಲಾವಕಾಶ ಪಡೆದರೂ ವರದಿ ಸಲ್ಲಿಸದಿರುವುದಕ್ಕೆ ಹಾಗೂ ನ್ಯಾಯಾಲಯ ವಿಚಾರಣೆಗೂ ಹಾಜರಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಪೀಠ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ವಲಯ-7ರ ಆಯುಕ್ತರ ವಿರುದ್ಧ ತಲಾ 25 ಸಾವಿರ ರೂ. ಮೊತ್ತದ ಜಾಮೀನು ಸಹಿತ ವಾರಂಟ್ ಹೊರಡಿಸಿತ್ತು.