ಮೈಸೂರು: ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಜಡಿಮಳೆಗೆ ಹುಣಸೂರು ನಗರದ ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ, ನ್ಯೂ ಮಾರುತಿ ಬಡಾವಣೆಯ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು ದಿನಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಶಬ್ಬೀರ್ ನಗರ, ಕಿರಿಜಾಜಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಹುಣಸೂರು ನ್ಯಾಯಾಲಯ ಆವರಣಕ್ಕೆ ನೀರು ನುಗ್ಗಿದೆ. ತೋಟಗಾರಿಕೆ ಇಲಾಖೆ ಜಲಾವೃತಗೊಂಡಿದೆ. ಬಡಾವಣೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ.
ಮುಂಜಾನೆ 03 ಗಂಟೆಯಿಂದಲೇ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು ನೇತೃತ್ವದಲ್ಲಿ ಪೌರಾಯುಕ್ತ ರವಿಕುಮಾರ್, ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ್, ಹುಣಸೂರು ಅಗ್ನಿ ಶಾಮಕ ಅಧಿಕಾರಿ ಸತೀಶ್, ನಗರಸಭೆ ಸಿಬ್ಬಂದಿ ಮನೆಗಳಲ್ಲಿ ಸಿಲುಕಿರುವವರನ್ನು ಹೊರಕರೆತರಲು ಹರಸಾಹಸ ಪಡುತ್ತಿದ್ದಾರೆ. ಈ ಮೊದಲು ನಗರಸಭೆ ಸಿಬ್ಬಂದಿ ಬಡಾವಣೆ ನೀರು ಸರಾಗವಾಗಿ ಹರಿದು ಹೋಗಲು ಅಲ್ಲಲ್ಲಿ ತಾತ್ಕಾಲಿಕ ಚರಂಡಿ ನಿರ್ಮಿಸಿದ್ದರೂ ಕೂಡ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಈ ಸಮಸ್ಯೆಯಾಗಿದೆ.