ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ವಿಶ್ವಯೋಗ ದಿನವನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಯೋಗದ ವಿಚಾರದಲ್ಲಿ ತಮ್ಮ ಜಿಲ್ಲೆ ಗಿನ್ನಿಸ್ ದಾಖಲೆ ಮಾಡಿರುವುದನ್ನು ಸ್ಮರಿಸಿಕೊಂಡಿದ್ದಾರೆ.
ವಿಶ್ವ ಯೋಗ ದಿನದ ಸಂದರ್ಭ ಟ್ವೀಟ್ ಮೂಲಕ ತಮ್ಮ ಸಾಧನೆಯನ್ನು ಹೊರಹಾಕಿರುವ ಅವರು, ದೆಹಲಿಯ ರಾಜ್ಪಥ್ನಲ್ಲಿ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಅಳಿಸಿ ಮೈಸೂರಿನ ಹೆಸರಿನಲ್ಲಿ ಇಂಥದ್ದೊಂದು ಸಾಧನೆ ಉಳಿಯುವಂತೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಅವರು, ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಯೋಗವನ್ನು ಶಾಂತಿಯುತ ಸಮಾಜ ಮತ್ತು ಮಾನಸಿಕ ನೆಮ್ಮದಿಯ ಪ್ರತೀಕವೆಂದು ಭಾವಿಸಲಾಗುತ್ತದೆ. ಇಂತಹ ಮಹತ್ವ ಇರುವ ಯೋಗ ದಿನವನ್ನು ಹಿಂದೆ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬೃಹತ್ ಪ್ರಮಾಣದಲ್ಲಿ ಆಯೋಜಿಸಿದ್ದೆ ಎಂದು ತಿಳಿಸಿದ್ದಾರೆ. 2017 ರಲ್ಲಿ 3 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಮ್ಮ ಮೈಸೂರಿನಲ್ಲಿ ಏಕಕಾಲಕ್ಕೆ 50 ಸಾವಿರ ಜನರು ಯೋಗಾಸನ ಮಾಡುವ ಮೂಲಕ ದೆಹಲಿಯ ರಾಜ್ಪಥ್ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಅಳಿಸಿ ಹಾಕಿ ಮೈಸೂರಿನ ಹೆಸರಲ್ಲಿ ಗಿನ್ನಿಸ್ ದಾಖಲೆ ನಿರ್ಮಾಣವಾಗಿತ್ತು.
ಇನ್ನೊಂದು ಸಂಗತಿ ಎಂದರೆ ಗಿನ್ನಿಸ್ ಸಂಸ್ಥೆಯವರು ಆ ದಾಖಲೆಯ ಪ್ರಮಾಣ ಪತ್ರವನ್ನು ನನ್ನ ಹೆಸರಲ್ಲೇ ನೀಡಿದ್ದು ಈಗಲೂ ಅಂತಹದ್ದೊಂದು ದಾಖಲೆ ನನ್ನ ಹೆಸರಲ್ಲಿ ದಾಖಲಾಗಿದೆ ಎಂಬುದು ನಿಮ್ಮೊಡನೆ ಹಂಚಿಕೊಳ್ಳಬಹುದಾದ ಸಂತೋಷದ ಸಂಗತಿಗಳಲ್ಲಿ ಒಂದು ಎಂದಿದ್ದಾರೆ. ನಾಲ್ಕು ವರ್ಷಗಳ ನಂತರವೂ ಇಂದಿಗೂ ಮೈಸೂರು ಜಿಲ್ಲೆ ಸಾಧಿಸಿದ ಈ ಸಾಧನೆ ಗಿನ್ನಿಸ್ ದಾಖಲೆ ದಾಖಲೆಯಾಗಿಯೇ ಉಳಿದಿದ್ದು, ಇದನ್ನ ಮುರಿಯುವಂತಹ ಪ್ರಯತ್ನವನ್ನು ಬೇರೆ ಯಾವುದೇ ಜಿಲ್ಲೆ ಅಥವಾ ರಾಜ್ಯಗಳು ಮಾಡಿಲ್ಲಾ ಎಂದಿದ್ದಾರೆ.
ಇದನ್ನೂ ಓದಿ:ಚಿಕ್ಕಪೇಟೆಯಲ್ಲಿ ಗರಿಗೆದರಿದ ವ್ಯಾಪಾರ ವಹಿವಾಟು: ವ್ಯಾಪಾರಸ್ಥರು ಫುಲ್ ಖುಷ್