ಮೈಸೂರು :ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಮಾಜಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಅವರ ಕಡೆಗಣನೆ ಬೆಳವಣಿಗೆ ನಂಜನಗೂಡು ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸುತ್ತಿದೆ. ಡಾ. ಹೆಚ್. ಸಿ ಮಹದೇವಪ್ಪ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಘೇರಾವ್ ಹಾಕಿದ್ದಾರೆ.
ನಂಜನಗೂಡಿನ ಪ್ರವಾಸಿಮಂದಿರದಲ್ಲಿ ಈ ಘಟನೆ ನಡೆದಿದ್ದು, ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ ಜೆ ವಿಜಯಕುಮಾರ್ಗೆ ಮುತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾ. ಯತೀಂದ್ರ ಸಿದ್ದರಾಮಯ್ಯ ಕಾರನ್ನು ತಡೆದ ಡಾ. ಮಹದೇವಪ್ಪ ಬೆಂಬಲಿಗರು.. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರ ಬೆಳವಣಿಗೆಗೆ ಮಹದೇವಪ್ಪನವರ ಕೊಡುಗೆ ಇದೆ. ಆದರೆ, ಇದೀಗ ಮಹದೇವಪ್ಪನವರನ್ನ ಕಡೆಗಣಿಸುತ್ತಿದ್ದಾರೆಂದು ಆರೋಪಿಸಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅವರು ಮಹದೇವಪ್ಪ ಬೆಂಬಲಿಗರ ಕ್ಷಮೆ ಕೋರಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ನಡೆದ ಜಾಥಾದ ಸ್ವಾಗತ ಭಾಷಣದಲ್ಲಿ ಕಾಂಗ್ರೆಸ್ ನಾಯಕರು ಹೆಚ್ಸಿಎಂ ಹೆಸರು ಜೊತೆಗೆ ಅವರ ಬೆಂಬಲಿಗರ ಹೆಸರನ್ನು ಪ್ರಸ್ತಾಪ ಮಾಡದೆ ಇದ್ದದ್ದು, ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರವಾಸಿ ಮಂದಿರದಲ್ಲಿ ಮುಖಂಡರಿಗೆ ಏರ್ಪಡಿಸಿದ್ದ ಔತಣಕೂಟದಲ್ಲೂ ಸಹ ಹೆಚ್ಸಿಎಂ ಬೆಂಬಲಿಗರು ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದು ಸಹ ಅಸಮಾಧಾನಕ್ಕೆ ಕಾರಣವಾಯಿತು.
ಇದನ್ನೂ ಓದಿ:ಪಾಕ್ ಬಸ್ ಸ್ಫೋಟದಲ್ಲಿ 9 ಚೀನಿ ಪ್ರಜೆಗಳು ಸೇರಿ 13 ಸಾವು: 'ಭಯೋತ್ಪಾದಕ ದಾಳಿ' ಎಂದ ಚೀನಾ
ಸದ್ಯದ ಬೆಳವಣಿಗೆ ಗಮನಿಸಿದರೆ ನಂಜನಗೂಡು ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲವೆಂದೇ ಗೋಚರವಾಗುತ್ತಿದೆ. ದಿನೇದಿನೆ ನಂಜನಗೂಡು ಕಾಂಗ್ರೆಸ್ನಲ್ಲಿ ಭಿನ್ನಮತ ಉಲ್ಬಣವಾಗುತ್ತಿದೆ. ನಾಯಕರ ನಡುವಿನ ಮುನಿಸು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.