ಮೈಸೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಸೇರಿಕೊಂಡರು. ನನ್ನನ್ನು ಸೋಲಿಸಲು ಕೆಲ ಬಿಜೆಪಿ ನಾಯಕರೂ ಸೇರಿಕೊಂಡರು. ಇದೆಲ್ಲವನ್ನೂ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದು ಹುಣಸೂರು ಉಪಚುನಾವಣೆ ಬಿಜೆಪಿ ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರು ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಮಾರಿಕೊಂಡವನು ಎನ್ನುತ್ತೀರಿ. ಪಾಪ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದವರು ಯಾರು? ಸೋಮಶೇಖರ್ ತನ್ನ ಮನೆ ದುಡ್ಡು ತಂದು ಚುನಾವಣೆ ಮಾಡಿದ. ಅವನನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದರು. ನನ್ನನ್ನು ನಾನು ಮಾರಿಕೊಂಡಿಲ್ಲ. ಇವತ್ತಿಗೂ ವಿಶ್ವನಾಥ್ ಶುದ್ಧವಾಗಿದ್ದಾನೆ. ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದೆವು. ನೀವು ರಾಜ್ಯ ಮಾರಿದ್ದೀರಿ, ಜಾತಿಯನ್ನೂ ಮಾರಿದ್ದೀರಿ. ಒಕ್ಕಲಿಗ ವಿರೋಧಿ ನಾನೋ, ನೀವೋ ಈಗ ಹೇಳಿ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.