ಮೈಸೂರು:ಮಂತ್ರಿ ಮಾಡೋದು ಬಿಡೋದು ಯಡಿಯೂರಪ್ಪ ಗೆ ಬಿಟ್ಟಿರೋದು. ಅದನ್ನು ನಡೆಸಿಕೊಳ್ಳೋದು ಬಿಡೋದು ಅವರ ಧರ್ಮ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸೋತವರಿಗೆ ಸ್ಥಾನ ಕೊಡದಿರಲು ಕಾನೂನಿನ ನಿರ್ಬಂಧ ಇದೆ ಅಂದಿದ್ದಾರೆ. ಆದರೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ, ಇದರ ಬಗ್ಗೆ ಮನವರಿಕೆ ಆಗಬೇಕಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಚುನಾವಣೆಗೆ ನಿಂತು ಪವಿತ್ರರಾಗಿ ಎಂದಿತ್ತು, ನಾವು ಅರ್ಜಿ ಹಾಕುತ್ತಿದ್ದಂತೆ ಪವಿತ್ರರಾದೆವು. ತೀರ್ಪಿನಲ್ಲಿ ಸೋಲು ಗೆಲುವಿನ ಉಲ್ಲೇಖವಿಲ್ಲ. ಅದನ್ನು ಬಿಎಸ್ವೈ ಅವರು ಕಾನೂನು ತಜ್ಞರನ್ನು ಕರೆಸಿ ಕೇಳಿಕೊಳ್ಳಲಿ. ನಮಗೆ ಸಚಿವ ಸ್ಥಾನ ಕೊಡೊದು ಬಿಡೋದು ಬೇರೆ. ಆದರೆ ಕಾನೂನು ಅಡ್ಡಿ ಅನ್ನೋದನ್ನ ಸೋತವರು ಒಪ್ಪಲ್ಲ, ಕಾನೂನೂ ಕೂಡಾ ಒಪ್ಪಲ್ಲ. ಸಾರ್ವಜನಿಕರ ಮನಸ್ಸಿನಲ್ಲಿ ಇದು ಬರಬಾರದು ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಹೆಚ್. ವಿಶ್ವನಾಥ್ ಹೇಳಿಕೆ ನಾನು ಮಂತ್ರಿ ಆಗಲೇಬೇಕು ಎಂದು ಆಸೆ ಇಟ್ಟುಕೊಂಡಿದ್ದವನಲ್ಲ, ಇವತ್ತು ಆಗಿಲ್ಲ ಅಂತ ಆಕಾಶ ಬಿದ್ದೋಗಿಲ್ಲ. ಎಲ್ಲರಿಗೂ ಕೊಟ್ಟಂತೆ ಮಂತ್ರಿಮಂಡಲದಲ್ಲಿ ಸ್ಥಾನ ಮಾಡಿಕೊಡುವಂತೆ ನನಗೂ ಮಾತು ಕೊಟ್ಟಿದ್ದಾರೆ ಎಂದು ತಿಳಿಸಿದರು. ಎಲ್ಲರಿಗೂ ನಡೆಸಿದ್ದಾರೆ, ಇನ್ನೊಂದಷ್ಟು ಜನರಿಗೆ ಮಾಡುತ್ತಾರೆ. ಮುಖ್ಯಮಂತ್ರಿಗಳನ್ನ ಇಂದಿಗೂ ನಾನು ನಂಬಿದ್ದೀನಿ ಎಂದರು.