ಮೈಸೂರು:ದಸರಾದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ 500 ಜನರಿಗೆ ಅವಕಾಶ ನೀಡಲಾಗಿದೆ. ಜಂಬೂ ಸವಾರಿಗೆ ಮಾತ್ರ ಒಂದು ಚೇರ್ನಿಂದ ಮತ್ತೊಂದು ಚೇರ್ಗೆ ಮೂರುವರೆ ಮೀಟರ್ ಅಂತರವಿರಬೇಕು ಎಂಬ ಮಾರ್ಗಸೂಚಿ ಬಿಡುಗಡೆ ಮಾಡಿ, ತಾಂತ್ರಿಕ ಸಲಹಾ ಸಮಿತಿಗೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದಸರಾ ಆಚರಣೆಗೆ ಮಾರ್ಗ ಸೂಚಿ ಬಿಡುಗಡೆ ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಚಿವರು, ಮಾಧ್ಯಮಗಳ ಜತೆ ಮಾತನಾಡಿದರು.
ಇಲ್ಲಿಯವರೆಗೆ ಕರ್ನಾಟಕದಲ್ಲಿ 5 ಕೋಟಿ 60 ಲಕ್ಷ ಕೋವಿಡ್ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಡಿಸೆಂಬರ್ ಅಂತ್ಯದವರೆಗೆ 2ನೇ ಡೋಸ್ ಲಸಿಕೆ ನೀಡಲಾಗುವುದು. ಕೆಲವು ಸಮುದಾಯ, ಪ್ರದೇಶ, ಬೆಟ್ಟಗುಡ್ಡಗಳ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಅವರಿಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೊಂದು ತಿಂಗಳಲ್ಲಿ ಕೆಪಿಎಸ್ಸಿ ಮೂಲಕ ವೈದ್ಯರು, ಆರೋಗ್ಯ ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ ಹಾಗೂ ನರ್ಸ್ಗಳ ನೇಮಕಾತಿ ನಡೆಯುತ್ತಿದ್ದು, 700 ರಿಂದ 800 ನರ್ಸ್ಗಳ ನೇಮಕಾತಿ ನಡೆಯಲಿದೆ ಎಂದರು.
ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಈಗಾಗಲೇ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿದಿದ್ದು, ಕೊನೆಯ ಹಂತದಲ್ಲಿದೆ. ಯಾವಾಗ ಬೇಕಾದರೂ ಒಪ್ಪಿಗೆ ನೀಡಬಹುದು. ಆಗ 12 ರಿಂದ 15 ವರ್ಷದವರೆಗಿನ ಮಕ್ಕಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲು ಆರಂಭಿಸುತ್ತೇವೆ ಎಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿರುವ ಗುತ್ತಿಗೆ ಆಧಾರದ ನೌಕರರು ಇನ್ನು ಮೂರು ತಿಂಗಳ ಕಾಲ ಅಂದರೆ ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ಕೆಲಸ ನಿರ್ವಹಿಸಲಿದ್ದಾರೆ. ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಮೈಸೂರು ಮೆಡಿಕಲ್ ಕಾಲೇಜ್ ವ್ಯಾಪ್ತಿಯ ಹಳೆಯ ಕಟ್ಟಡಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕ್ಯಾಬಿನೇಟ್ ಹಂತದಲ್ಲಿ ತೀರ್ಮಾನ ಆಗಲಿದೆ. ಇನ್ನು ಶಾಸಕ ರಾಮದಾಸ್ಗೆ ಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಚಿವ ಸುಧಾಕರ್ ಇದೇ ವೇಳೆ ಹೇಳಿದರು.
ಇದನ್ನೂ ಓದಿ:ದಸರಾ ಮಹೋತ್ಸವ ಹಿನ್ನೆಲೆ: ಫುಲ್ ಅಲರ್ಟ್ ಆದ ಖಾಕಿ ಪಡೆ