ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ವೈರತ್ವ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ನಿನ್ನೆ (ಮಂಗಳವಾರ) ಮೈಸೂರು ಜಿಲ್ಲೆಯ ಹಿನಕಲ್ನ ವೇದಿಕೆ ಕಾರ್ಯಕ್ರಮದಲ್ಲಿ ಜಿ.ಟಿ.ಡಿ ಹಾಗು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಂಡಿದ್ದು, ಇದೀಗ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಭಾರಿ ಅಂತರದ ಮತಗಳಿಂದ ಸೋಲಿಸಿದ್ದ ಜಿ.ಟಿ.ದೇವೇಗೌಡ ನಂತರ ಹೆಚ್.ಡಿ.ಕುಮಾರಸ್ವಾಮಿ ಜತೆ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ಕಾರ್ಯಕ್ರಮಗಳಿಂದ ದೂರವಿದ್ದು, ಕಾಂಗ್ರೆಸ್ ಸೇರುವ ಬಗ್ಗೆ ಒಲವು ಹೊಂದಿದ್ದರು. ನಿನ್ನೆ (ಮಂಗಳವಾರ) ವೇದಿಕೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ನಡೆ, ನುಡಿ ಒರಟು. ಆದರೆ ಮನಸ್ಸು ಬಹಳ ಮೃದು ಎಂದು ವೇದಿಕೆಯಲ್ಲಯೇ ಹೊಗಳಿದ್ದಾರೆ.
ಇದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಜಿ.ಟಿ.ದೇವೇಗೌಡ ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದರು. ಆದರೂ ಕಾಂಗ್ರೆಸ್ ತತ್ವ ಹಾಗು ಸಿದ್ದಾಂತ ಒಪ್ಪಿಕೊಂಡು ಬರುವುದಾದರೆ ಸ್ವಾಗತ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಕಾಂಗ್ರೆಸ್ಗೆ ಬಂದರೆ ಲಾಭವೇನು?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿ, ಅಧಿಕಾರ ಪಡೆಯಲು ಈಗಾಗಲೇ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲು ಪ್ರಯತ್ನಿಸುತ್ತಿದೆ. ಇದರ ಜತೆಗೆ ಮೈಸೂರು ಜಿಲ್ಲೆಯಲ್ಲಿ ಅತಿಹೆಚ್ಚು ಸ್ಥಾನ ಗಳಿಸಬೇಕಾದ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ತಾನೊಬ್ಬ ಪ್ರಬಲ ನಾಯಕ ಎಂದು ಸಾಬೀತುಪಡಿಸಲು ಹಾಗು ಮುಖ್ಯಮಂತ್ರಿಯಾಗುವ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್ಗೆ ಕರೆತಂದರೆ ಈ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬಹುದು.