ಮೈಸೂರು:ಪರಿಸರಕ್ಕೆ ಮಾರಕವಾಗಿರುವಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಕಡಿವಾಣಕ್ಕೆ ಮುಂದಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸ್ನೇಹಿ ಮತ್ತು ಆರೋಗ್ಯ ಸ್ನೇಹಿ ಅರಿಶಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಕೊರೊನಾದಿಂದ ದೂರವಿರಿ ಎಂಬ ಸಂದೇಶ ನೀಡುತ್ತಿದೆ.
ಇದೇ 22ಕ್ಕೆ ಗಣೇಶ ಚತುರ್ಥಿ ಹಬ್ಬ. ಪ್ರತಿ ವರ್ಷ ಪಿಒಪಿ ಗಣೇಶ ಮೂರ್ತಿಗಳ ನಿಷೇಧಕ್ಕೆ ಮಾಲಿನ್ಯ ಮಂಡಳಿ ಆದೇಶ ಹೊರಡಿಸುತ್ತಲೇ ಇದೆ. ಆದರೂ ಕದ್ದುಮುಚ್ಚಿ ತಯಾರು ಮಾಡಲಾಗುತ್ತಿದೆ. ಹಾಗೆಯೇ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪಿಒಪಿ ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಕೆರೆ, ಕುಂಟೆಗಳನ್ನು ಕಲುಷಿತ ಮಾಡುತ್ತಿದ್ದಾರೆ. ಹೀಗಾಗಿ, ಅದನ್ನು ತಡೆಯಲು ಮಂಡಳಿ ಸಿದ್ದತೆ ನಡೆಸುತ್ತಿದೆ.
ಅರಿಶಿನ ಗಣೇಶನ ತಯಾರಿ ಹೇಗೆ?
ಅರಿಶಿನ ಗಣೇಶ ಮೂರ್ತಿಯನ್ನು ಪರಿಚಯಿಸುವ ಮೂಲಕ ವೈರಸ್ನಿಂದ ದೂರವಿರಿ ಎಂದು ಮಂಡಳಿ ಅರಿವು ಮೂಡಿಸುತ್ತಿದೆ. ಅರಿಶಿನಕ್ಕೆ ನೀರು ಬೆರೆಸಿ ಹದ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಜನಿವಾರ ಹಾಕಿ, ಮೆಣಸಿನಕಾಳನ್ನು ಬಳಸಿ ಮೂರ್ತಿಗೆ ಕಣ್ಣು ನೀಡಿ, ಹೂವುಗಳಿಂದ ಅಲಂಕಾರ ಮಾಡಿದರೆ ಅರಿಶಿನ ಗಣೇಶ ಸಿದ್ದವಾಗುತ್ತದೆ ಎಂದು ಬರೆದಿರುವ ಕರಪತ್ರಗಳನ್ನು ವಾಹನಗಳ ಮೇಲೆ ಅಂಟಿಸಿ ಅರಿವು ಮೂಡಿಸಲಾಗುತ್ತದೆ.
ವಿವಿಧ ತಿನಿಸು ಪೊಟ್ಟಣಗಳ ಮೇಲೆ ಸ್ಟಿಕ್ಕರ್ ಅಂಟಿಸುತ್ತಿದೆ. ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿನದಿಂದ ಈ ರೀತಿ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ, ಪೂಜಿಸಿದ ನಂತರ ಮನೆಯಲ್ಲೆ ವಿಸರ್ಜನೆ ಮಾಡಬಹುದು. ಇದರಿಂದ ಕೆರೆಯು ಕಲುಷಿತವಾಗುವುದಿಲ್ಲ. ಮೈಸೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಜೊತೆಗೆ ಹಾಲಿನ ಪೊಟ್ಟಣ, ವಿದ್ಯುತ್ ನೀರಿನ ಬಿಲ್ ಚೀಟಿಯಲ್ಲಿ ಅರಿಶಿನ ಗಣೇಶ ಮೂರ್ತಿ ಬಳಸುವ ಸಂದೇಶ ಕೊಡಲು ಮುಂದಾಗಿದೆ.
ಅರಿಶಿನ ಗಣೇಶ ಮೂರ್ತಿಗಳ ಬಳಕೆಗೆ ಜಾಗೃತಿ ಈ ವರ್ಷದ ಹಬ್ಬದಲ್ಲಿ ಕೊರೊನಾ ಸನ್ನಿವೇಶ ಇರುವುದರಿಂದ ಅರಿಶಿನ ಗಣೇಶ ಬಳಸಬೇಕು. ಅರಿಶಿನದಲ್ಲಿ ರೋಗ ನಿರೋಧಕ ಶಕ್ತಿಯಿದೆ. ಅದರ ಬಳಕೆಯಿಂದ ರೋಗಾಣು ದೂರವಾಗುತ್ತದೆ. ಜೊತೆಗೆ ಅರಿಶಿನದಲ್ಲಿ ಸುಲಭವಾಗಿ ಮತ್ತು ಅತಿ ಕಡಿಮೆ ಸಮಯದಲ್ಲಿ ಗಣೇಶ ಮೂರ್ತಿ ಮಾಡಬಹುದು. ಬಣ್ಣಬಣ್ಣದ ಗಣೇಶ ಬಳಸಬಾರದು ಎಂದು ಮೈಸೂರು ಪ್ರಾದೇಶಿಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಪ್ರಕಾಶ್ ಅವರು ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ಮಾಹಿತಿ ಮಾಹಿತಿ ನೀಡಿದರು.