ಮೈಸೂರು:ಬ್ರಿಟಿಷರ ವಿರುದ್ಧ ಅಹಿಂಸಾ ನೀತಿಯಿಂದಲೇ ಸ್ವಾತಂತ್ರ್ಯ ಪಡೆಯಲು, ದೇಶವನ್ನು ತಿರುಗಿದ ಮಹಾತ್ಮಗಾಂಧೀಜಿ, ಸ್ವಾತಂತ್ರ್ಯದ ಚುರುಕು ಮುಟ್ಟಿಸಲು ಈ ಗ್ರಾಮಕ್ಕೆ ಎರಡು ಬಾರಿ ಭೇಟಿ ನೀಡಿ ದೇಶೀಯತೆ ನೇಯ್ಗೆ ಕಾರ್ಖಾನೆಯನ್ನು ಗುಣಗಾನ ಮಾಡಿದ್ದರು.
ಆ ಊರು ಯಾವುದಂತೀರಾ? ನಂಜನಗೂಡು ತಾಲೂಕಿನ ಅನತಿ ದೂರು ಕ್ರಮಿಸಿದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ 'ಬದನವಾಳು ಗ್ರಾಮಕ್ಕೆ ಸ್ವಾಗತ' ಎಂಬ ಬೋರ್ಡ್ ಕಾಣಸಿಗುತ್ತದೆ. ಈ ಊರಿನ ಒಳಗೆ ಹೋಗಿ ನೋಡಿದಾಗ ಇಂದಿಗೂ ದೇಶಿ ಬಟ್ಟೆ ನೇಯ್ಗೆ ನೇಯುವ ಜಗಲಿ ಮೇಲೆ ಮಹಾತ್ಮ ಗಾಂಧೀಜಿ ಕುಳಿತು ಬ್ರಿಟಿಷರ ವಿರುದ್ಧ ಮಾಡಿದ ಭಾಷಣ ಹಾಗೂ ರಾಷ್ಟ್ರ ಪ್ರೇಮ ಸಂದೇಶ ನೆನಪುಗಳು ಢಾಳಾವಾಗಿ ಭಾವಚಿತ್ರದಲ್ಲಿ ಕಾಣುತ್ತದೆ.
ಸ್ವಾತಂತ್ರ್ಯ ಪಡೆಯಲು ದೇಶ ಸುತ್ತಿ, ಬ್ರಿಟಿಷರ ವಿರುದ್ಧ ರಾಷ್ಟವೇ ಎದ್ದು ನಿಲ್ಲುವಂತೆ ಮಾಡಿದ 'ಮಹಾತ್ಮ' ನಂಜನಗೂಡು ತಾಲೂಕಿನ ಗ್ರಾಮಕ್ಕೆ 93 ವರ್ಷಗಳ ಹಿಂದೆ ಭೇಟಿ ಕೊಟ್ಟಿದ್ದರು. ಅವರ 'ಗಾಂಧಿ'ಯತೆ ನೆನಪುಗಳು ಈ ಗ್ರಾಮದಲ್ಲಿ ಇಂದಿಗೂ ಹಸಿರಾಗಿಯೇ ಉಳಿದುಕೊಂಡಿದೆ.
ಮೈಸೂರಿನ ನಂಜನಗೂಡು ತಾಲೂಕಿನ 'ಬದವನಾಳು' ಗ್ರಾಮ ಮಹಾತ್ಮನ ಪಾದ ಸ್ಪರ್ಶದಿಂದ ದೇಶದ ಸ್ವಾತಂತ್ರ್ಯಕ್ಕೆ ಕಿಚ್ಚು ಹಚ್ಚಿ ದೇಶಿಯ ಕೈಗಾರಿಕೆಗಳ ಬದಲಾವಣೆಗೆ ನಾಂದಿ ಹಾಡಿದ ಪ್ರಮುಖ ಗ್ರಾಮ. 1927ರಲ್ಲಿ ಈ ಗ್ರಾಮಕ್ಕೆ ಭೇಟಿ ಕೊಟ್ಟು ದೇಶಿಯ ಕೈಗಾರಿಕೆ ಹಾಗೂ ಸ್ವಾತಂತ್ರ್ಯಗಳಿಸುವ ಹೋರಾಟಕ್ಕೆ ಧುಮುಕುವಂತೆ ಕರೆ ಕೊಟ್ಟು ತೆರಳಿದ ಗಾಂಧೀಜಿ ದೇಶದ ಇತಿಹಾಸ ಪುಟಗಳಲ್ಲಿ ಹೇಗೆ ಹಾಸು ಹೊಕ್ಕಾಗಿದ್ದಾರೆ. ಅದೇ ರೀತಿ ಗಾಂಧೀಜಿ ಭೇಟಿ ನೀಡಿ 93 ವರ್ಷಗಳೇ ಉರುಳಿದರೂ ಈ ಗ್ರಾಮದಲ್ಲಿ ಗಾಂಧಿಯತೆ ಕಲ್ಪನೆ ಇನ್ನೂ ಈ ಗ್ರಾಮಬಿಟ್ಟು ಹೋಗಿಲ್ಲ.
ಮೈಸೂರು ಗಾಂಧಿ( ಅಂದು ಮೈಸೂರು ರಾಜ್ಯ) ಎಂದೇ ಮನೆಮಾತಾಗಿದ್ದ ತಡಗೂರು ರಾಮಚಂದ್ರರಾವ್ ರವರು, 1927ರಲ್ಲಿ ಮಹಾತ್ಮ ಗಾಂಧೀಜಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಕರೆದುಕೊಂಡು ಹೋಗಿ, ಬದನವಾಳುವಿನಲ್ಲಿ ನಾಲ್ಕು ಜನ ಮಹಿಳೆಯರು ಸೇರಿ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಯನ್ನು ತೆರದಿದ್ದ ಬಗ್ಗೆ ವಿವರಣೆ ನೀಡುತ್ತ, ಸ್ವಾತಂತ್ರ್ಯ ಹೋರಾಟ ಕಿಚ್ಚಿಗೆ ಪ್ರೇರಣೆ ನೀಡಿದ್ದರು. ಅಂದು ಗಾಂಧೀಜಿ ಬದನವಾಳುವಿಗೆ ಭೇಟಿ ಕೊಡುವುದರ ಜೊತೆಗೆ ದೇಶಿಯ ಕೈಗಾರಿಕೆಗೆ ಪ್ರೇರಣೆ ನೀಡುವಂತೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿ ತೆರಳಿದ ನಂತರ 1932ರಲ್ಲಿ ಭೇಟಿ ಕೊಟ್ಟು ಕೈಗಾರಿಕೆ ಬೆಳವಣಿಗೆ ವಿಶೇಷ ಕಾಳಜಿ ವಹಿಸಿ ಮಾರ್ಗದರ್ಶನ ನೀಡಿದರು. ಸ್ವಾತಂತ್ರ್ಯೋತ್ಸವ ದಿನ ಬಂದರೆ ಬದನವಾಳುವಿನಲ್ಲಿ 'ಅಹಿಂಸಾ' ತತ್ವ ಸಾರಿದ ದೂತನ ನೆನಪು ಕಾಡುತ್ತದೆ.