ಮೈಸೂರು :ವೈದ್ಯಕೀಯ ದಂಪತಿಯ 12 ವರ್ಷದ ಪುತ್ರನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಬಳಸಿದ 2 ಕಾರು, 5 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಾ ಬಡಾವಣೆಯಲ್ಲಿ ಜೂನ್ 23 ರಂದು 12 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ತಕ್ಷಣ ಹಲವು ತಂಡಗಳನ್ನು ರಚಿಸಿ, ಕಾರ್ಯಾಚರಣೆಗಿಳಿದ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದರು. ಆದರೆ ಆರೋಪಿಗಳು ಪರಾರಿಯಾಗಿದ್ದರು.
ತಾತನನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ಅಪಹರಣದ ರೂವಾರಿ : ಅಪಹರಣಕ್ಕೊಳಗಾಗಿದ್ದ ಬಾಲಕನ ತಾತನನ್ನು ಆರೈಕೆ ಮಾಡಲು ವೈದ್ಯರ ಮನೆಯಲ್ಲಿದ್ದ ವ್ಯಕ್ತಿಯೇ ಬಾಲಕನನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದು, ಸಾಲ ಮಾಡಿದ್ದ ಹಣವನ್ನು ತೀರಿಸಲು ಈ ಸಂಚು ಮಾಡಿದ್ದನು. 5 ಜನರಲ್ಲಿ ಇಬ್ಬರು ಚಾಲಕರು, ಇಬ್ಬರು ಡೇ ಕೇರ್ ಅಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬನಿಗೆ ಏನು ಕೆಲಸ ಇರಲಿಲ್ಲ. ಇದರಲ್ಲಿ ಒಬ್ಬ ಅಪಹರಣಕಾರ ವೈದ್ಯರ ಮನೆಯಲ್ಲಿ ತಾತನನ್ನು ಆರೈಕೆ ಮಾಡುತ್ತಿದ್ದನು. ಈತನೇ ಪರಿಚಯಸ್ಥ 4 ಜನರನ್ನು ಸೇರಿಸಿಕೊಂಡು ಅಪಹರಣ ಮಾಡಿದ್ದು, ಅಪಹರಣದ ನಂತರ ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯದಿಂದ ಬಾಲಕನನ್ನು ಬಿಟ್ಟು ಪರಾರಿಯಾಗಿದ್ದರು.