ಮೈಸೂರು: ನನಗೆ ಟಿಕೇಟ್ ಕೈ ತಪ್ಪಿದಾಗ ಸಿದ್ದರಾಮಯ್ಯ ನೆನಪಾಗೋದಲ್ಲ. ಅವರು ಸಿಎಂ ಆಗಿದ್ದಕ್ಕೆ ನನ್ನನ್ನ ನೆನಪಿಸಿಕೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾತಿನಲ್ಲೇ ಕುಕ್ಕಿದ ಹಳ್ಳಿಹಕ್ಕಿ.. ವಿಶ್ವನಾಥ್‌ಗೆ ಟಿಕೇಟ್ ಕೈ ತಪ್ಪಿದಾಗಲೆಲ್ಲ ನಾನೇ ನೆನಪಾಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರನ್ನ ಕಾಂಗ್ರೆಸ್ಗೆ ಕರೆತಂದಿದ್ದು ನಾನು. ಇದನ್ನ ಸಿದ್ದರಾಮಯ್ಯ ಎಲ್ಲಿಯೂ ಹೇಳಲ್ಲ. ಪಾಪ ಅವರಿಗೆ ಕೃತಜ್ಞತಾ ಭಾವ ಇಲ್ಲ. ಅವರು ವಿಶ್ವನಾಥ್‌ನಿಂದ ನಾನು ಸಿಎಂ ಆಗಲು ಸಾಧ್ಯವಾಯ್ತು ಅಂತ ಎಲ್ಲಿಯೂ ಹೇಳಲ್ಲ ಎಂದು ಕುಟುಕಿದರು. ನನಗೆ ಟಿಕೇಟ್ ಕೈತಪ್ಪಲು ಅವರು ಹೇಗೆ ಕಾರಣ ಅಂತಾ ಸಂದರ್ಭ ಬಂದಾಗ ಹೇಳ್ತೀನಿ.. ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಮಯ ಬಂದಾಗ ಸತ್ಯ ಹೊರಬರಲಿದೆ ಎಂದರು.
ನಾಮ ನಿರ್ದೇಶನದ ಮೂಲಕ ಪರಿಷತ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಪರಿಷತ್ ಟಿಕೇಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ. ತಳಮಟ್ಟದ ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟಿರೋದು ಸ್ವಾಗತಾರ್ಹ ಎಂದರು. ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡದು ಸಿಗುತ್ತೆ, ಕೆಲವೊಮ್ಮೆ ಏನೂ ಸಿಗೋದೆ ಇಲ್ಲ. ರಾಜಕಾರಣ ಅಂದ್ರೆ ಸಿಗೋದು, ಪಡೆದುಕೊಳ್ಳೋದಲ್ಲ ಎಂದರು.
ನಾನು ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದರು. ಅವರು ಒಪ್ಪಿಗೆ ಸೂಚಿಸಿದ್ದಾರೆ. ಎಂಟಿಬಿ ನಾಗರಾಜ್ ಆಯ್ಕೆಗೆ ತೊಡಕಿಲ್ಲ ಅನ್ನೋದಾದ್ರೆ ನನಗೆ ಏಕೆ ತೊಡಕಾಗುತ್ತೆ?. ನನಗೂ ಕಾನೂನಿನ ಅರಿವಿದೆ. ನಮ್ಮ ಅನರ್ಹತೆ ಇದ್ದದ್ದು, ಕೇವಲ ಕೆಳಮನೆಗೆ ಮಾತ್ರ. ಮೇಲ್ಮನೆಗೆ ಆಯ್ಕೆಯಾಗೋಕೆ ಯಾವುದೇ ಅಡ್ಡಿಯಿಲ್ಲ. ನನ್ನನ್ನ ನಾಮನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.