ಮೈಸೂರು :ಈ ಬಾರಿ ಕೇಂದ್ರ ಬಜೆಟ್ ಬಗ್ಗೆ ರೈತರಿಗೆ ಹೆಚ್ಚಿನ ನಿರೀಕ್ಷೆ ಇಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಸೌಲಭ್ಯ ಕಲ್ಪಿಸುವ ನಿರೀಕ್ಷೆ ಇದೆ ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಫೆಬ್ರವರಿ 1ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ. ಕೇಂದ್ರ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಏನಾದರೂ ರೈತರಿಗೆ ಹೊಸದನ್ನ ನೀಡಬಹುದು ಅಷ್ಟೇ ಎಂದರು.
ಭಾರತ ದೊಡ್ಡ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಕಲ್ಯಾಣ ರಾಜ್ಯವಾಗಬೇಕಾದರೆ ಸಬ್ಸಿಡಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಡಿತರ ವ್ಯವಸ್ಥೆ, ಆರೋಗ್ಯ, ಶಿಕ್ಷಣ ವ್ಯವಸ್ಥೆ ಅಸಮಾನತೆಯಿಂದ ಕೂಡಿದೆ. ಕೊಳ್ಳುವ ಶಕ್ತಿ ಕಡಿಮೆ ಇದೆ. ಬಡವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಬಡವರಿಗೆ ಖರೀದಿಸುವ ಶಕ್ತಿಯನ್ನು ಹೆಚ್ಚು ಮಾಡುವ ಬಜೆಟ್ ನೀಡಬೇಕು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.