ಮೈಸೂರು:ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಂಸದ ರಾಘವೇಂದ್ರ ಅವರು ಕುಳಿತುಕೊಂಡು ಪಂಚಾಯತಿ ನಡೆಸಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಇದು ಅಧಿಕಾರ ದುರುಪಯೋಗ ಹಾಗೂ ಜಾತಿ ವ್ಯವಸ್ಥೆಯ ರಾಜಕಾರಣ ಅಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್ ಸೇಠ್ ಭೇಟಿ ಬಳಿಕ ಮಾತನಾಡಿದ ಅವರು, ರಂಭಾಪುರಿ ಸ್ವಾಮೀಜಿ, ಉಜ್ಜಯಿನಿ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಪುತ್ರ ಸೇರಿ ಸಭೆ ನಡೆಸಿ ಮಠಾಧೀಶರ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ. ನಾವು ಮಠಾಧೀಶರ ಬಳಿ ಹೋಗಿ ಟಿಕೆಟ್ ಕೊಟ್ಟಿಲ್ಲ. ಅವರೇ ಕರೆ ಮಾಡಿ ಜೆಡಿಎಸ್ನಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಆದ್ದರಿಂದ ಬಿ ಫಾರಂ ಕಳುಹಿಸಿಕೊಟ್ಟೆ. ಆ ನಂತರ ಇದೆಲ್ಲಾ ನಡೆದಿದೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಳಗಾವಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಮತದಾರರು ನೋಡುತ್ತಿದ್ದಾರೆ. ಬುಧವಾರ ಕೆ.ಆರ್.ಪೇಟೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ 8 ಸ್ಥಾನ ಬರದಿದ್ದರೆ ಕಷ್ಟ ಎಂದು ಹೇಳಿದ್ದಾರೆ. ನೆರೆ ಹಾವಳಿಯಲ್ಲೂ ಇಂತಹ ಕಸರತ್ತು, ಚುನಾವಣೆ ಬೇಕಿತ್ತಾ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಡಿಮೆ ಸೀಟು ಬಿಜೆಪಿಗೆ ಬಂದರೆ ಮುಂದೆ ಆಗಲಿರುವ ಬೆಳವಣಿಗೆ ಕುರಿತು ಫಲಿತಾಂಶದ ಬಳಿಕ ಹೇಳುತ್ತೇನೆ ಎಂದ ಅವರು, ಜೆಡಿಎಸ್ 1 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ ಎಂದರು.
ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ಮುಕ್ತವಾಗಿ ನಮ್ಮ ಅಭ್ಯರ್ಥಿಯ ಪರ ಕೆಲಸ ಮಾಡುವುದಿದ್ದರೆ ಸ್ವಾಗತ. ಸದ್ಯಕ್ಕೆ ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಜಾಪ್ರಭುತ್ವ ಬುಡಮೇಲು ಮಾಡಲು ಹೊರಟ 15 ಕ್ಷೇತ್ರಗಳ ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದರು.