ಮೈಸೂರು:ಕೇರಳ ಪ್ರವಾಸಿಗರು ನಕಲಿ ಕೋವಿಡ್ ರಿಪೋರ್ಟ್ ತೆಗೆದುಕೊಂಡು ಬರುತ್ತಿದ್ದು, ಆರೋಗ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕೇರಳ-ಮೈಸೂರು ಗಡಿ ಭಾಗದ ಹೆಚ್.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್ ಮೂಲಕ ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ವ್ಯಾಪಾರಸ್ಥರು ಮೈಸೂರಿಗೆ ಬರುತ್ತಾರೆ. ಇವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಆದ್ರೀಗ, ಬಾವಲಿ ಚೆಕ್ ಪೋಸ್ಟ್ನಲ್ಲಿ ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳಿಗೆ ನಕಲಿ ರಿಪೋರ್ಟ್ ಕಂಡುಹಿಡಿಯುವುದೇ ದೊಡ್ಡ ಸಾವಾಲಾಗಿದೆ.
ಕಳೆದೊಂದು ವಾರದಿಂದ ಒಂದೇ ನಂಬರ್ನ ಹಲವು ಕೋವಿಡ್ ರಿಪೋರ್ಟ್ ಪತ್ತೆಯಾಗುತ್ತಿದ್ದು, ಬಾವಲಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವವರು ತಮ್ಮ ಕೋವಿಡ್ ವರದಿಯಲ್ಲಿನ ಹೆಸರು, ದಿನಾಂಕ, ಎಸ್.ಆರ್.ಎಫ್ ಐಡಿಯನ್ನು ಕಡ್ಡಾಯವಾಗಿ ನಮೂದಿಸಬೇಕಿದೆ. ಪ್ರತಿದಿನ ಓಡಾಡುವ ಗೂಡ್ಸ್ ವಾಹನದ ಚಾಲಕರು, 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಬೇಕೆಂಬ ನಿಯಮ ಜಾರಿಗೊಳಿಸಲಾಗಿದೆ.