ಮೈಸೂರು: ಆಪರೇಷನ್ ಆನೆ ಎಂದು ಅರಣ್ಯ ಇಲಾಖೆಯಲ್ಲಿ ಪ್ರಸಿದ್ಧವಾಗಿರುವ ಅಭಿಮನ್ಯು ಸುಮಾರು 200 ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಕೀರ್ತಿ ಪಡೆದಿದ್ದಾನೆ. ಈ ಅಭಿಮನ್ಯು ಕುರಿತು ಪಶು ವೈದ್ಯ ನಾಗರಾಜ್ ವಿವರಿಸಿದ ರೋಚಕ ಅಂಶಗಳು ಇಲ್ಲಿವೆ.
ಅಭಿಮನ್ಯು ಆನೆ ಕುರಿತ ರೋಚಕ ಮಾಹಿತಿ ದಸರಾ ಗಜಪಡೆಯ ಮೊದಲ ತಂಡದಲ್ಲಿ ಅರಮನೆಗೆ ಆಗಮಿಸುವ 53 ವರ್ಷದ ಅಭಿಮನ್ಯು ಅನೆ, ಅರ್ಜುನನ ನಂತರ ಜಂಬೂ ಸವಾರಿಯನ್ನು ಹೊರುವ ಆನೆ ಎಂದು ಬಿಂಬಿತವಾಗಿದೆ. ಕಳೆದ 25 ವರ್ಷಗಳಿಂದ ಕರ್ನಾಟಕ ವಾದ್ಯಗೋಷ್ಠಿಯನ್ನು ಎಳೆಯುವ ಗಾಡಿಯಾನೆ ಎಂದೇ ಪ್ರಸಿದ್ಧಿ. ಅಷ್ಟೇ ಅಲ್ಲದೆ ಅಭಿಮನ್ಯು ಆನೆ ಅರಣ್ಯ ಇಲಾಖೆಗೆ ವರದಾನ ಎಂದೇ ಹೇಳಬಹುದು. ಕರ್ನಾಟಕ ಅಲ್ಲದೇ ಹೊರ ರಾಜ್ಯಗಳಾದ ಆಂಧ್ರ ಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ಸುಮಾರು 200 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕೀರ್ತಿ ಹೊಂದಿದ್ದಾನೆ. ಅಲ್ಲದೆ ದೇಶದಲ್ಲಿ ಈ ರೀತಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಏಕೈಕ ಆನೆ ಇದು ಎಂಬುದು ಕರ್ನಾಟಕದ ಹೆಮ್ಮೆ.
ಅಭಿಮನ್ಯುವಿನ ಕಾರ್ಯಾಚರಣೆ ಶೈಲಿ ಹೇಗೆ?:
ಆನೆ ಹಿಡಿಯುವುದು ತುಂಬಾ ಕಷ್ಟ ಹಾಗೂ ಸೂಕ್ಷ್ಮ ಕೆಲಸ. ಆದರೆ ಅಭಿಮನ್ಯು ಆನೆ ಕಾಡಾನೆ ಹಿಡಿಯಲು ಕಾಡಿನೊಳಗೆ ಹೋದರೆ ಕಾಡಾನೆಗಳು ಅಭಿಮನ್ಯುವಿನ ಮುಂದೆ ಅಥವಾ ಹಿಂದೆ ಇರುತ್ತವೆ. ಆದರೆ ಕಾಡಾನೆ ಕಂಡರೆ ಅಭಿಮನ್ಯು ನಿಲ್ಲುವ ರೀತಿ, ಕೊಡುವ ಸನ್ಹೆ ಹಾಗೂ ಸೂಕ್ಷ್ಮ ವಿಚಾರ ತಿಳಿದಿದೆ. ಅದಕ್ಕೆ ಅಭಿಮನ್ಯು ಆನೆಯನ್ನು ಕಾಡಾನೆ ಹಿಡಿಯುವ ಕಾರ್ಯಾಚರಣೆಯ ಆಪರೇಷನ್ ಹೀರೋ ಎಂದೇ ಕರೆಯಲಾಗುತ್ತದೆ.
ಇನ್ನು ಕಾಡಾನೆಯನ್ನು ಸೆರೆ ಹಿಡಿದ ನಂತರ ಅದನ್ನು ಲಾರಿಗೆ ಹತ್ತಿಸುವುದು ತುಂಬಾ ಕಷ್ಟದ ಕೆಲಸ. ಆದರೂ ಇಂತಹ ಕೆಲಸವನ್ನು ತುಂಬಾ ಸಲೀಸಾಗಿ ಮಾಡುತ್ತಾನೆ. ಎಂತಹ ಭಯಂಕರ ಕಾಡಾನೆ ಇದ್ದರೂ ಅದನ್ನು ಲಾರಿಯಲ್ಲಿ ಲೋಡ್ ಮಾಡಿ, ಟ್ರಾಲ್ ದಿಮ್ಮಿಗಳನ್ನು ಜೋಡಿಸಿ ಕಾಡಾನೆಯನ್ನು ಅದರ ಒಳಗೆ ಸೇರಿಸುತ್ತಾನೆ. ಇನ್ನು ಕಾಡಾನೆ ಕಾರ್ಯಾಚರಣೆಯಲ್ಲದೆ ಹುಲಿ ಕಾರ್ಯಚರಣೆಯಲ್ಲೂ ಭಾಗವಹಿಸುವ ಆನೆ ಸಹ ಹೌದು. ಹುಲಿಗೆ ಹೆದರದೆ ಹುಲಿಯನ್ನೇ ಅಟ್ಟಿಸಿಕೊಂಡು ಹೋಗುತ್ತಾನೆ ಎಂದು ಹೆಮ್ಮೆಯಿಂದ ಪಶುವೈದ್ಯ ಡಾ. ನಾಗರಾಜ್ ಹೇಳುತ್ತಾರೆ.