ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟರಿ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ವತಿಯಿಂದ ವೈದ್ಯಕೀಯ ಸೇವೆಗಳಿಗಾಗಿ ಪರಿಸರ ಸ್ನೇಹಿ (Electric Vehicles) ಸಂಚಾರಿ ಇ - ಸಂಜೀವಿನಿ 12 ದ್ವಿಚಕ್ರ ವಾಹನಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು.
ಈ ಹಿಂದೆ ಸಂಜಯ್ ನಗರ ವಾರ್ಡ್ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಾಯೋಗಿಕವಾಗಿ 2 ಇ-ಸಂಜೀವಿನಿ ವಾಹನಗಳನ್ನು ಹಸ್ತಾಂತರಿಸಿದ್ದರು. ಅದು ಯಶಸ್ವಿಯಾದ ಹಿನ್ನೆಲೆ ಇಂದು ಪೂರ್ವ ವಲಯ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ 12 ಪರಿಸರ ಸ್ನೇಹಿ ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಭೈರತಿ ಸುರೇಶ್, ರೋಟರಿ ರಾಜಮಹಲ್ ವಿಲಾಸ್ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿರುವ ಸಂಸ್ಥೆಯಾಗಿದ್ದು, ಕೋವಿಡ್ ಸಮಯದಲ್ಲಿ ಪಾಲಿಕೆಯ ಜೊತೆ ಕೈಜೋಡಿಸಿ ಬಹಳಷ್ಟು ಕೆಲಸ ಮಾಡಿದೆ.
ಬೆಂಗಳೂರು ಆಸ್ಪತ್ರೆಗೆಳಿಗೆ ಇ ಸಂಜೀವಿನಿ ವಾಹನ ಈ ಹಿಂದೆ ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಿದ್ದ ಇ - ಸಂಜೀವಿನಿ ಯೋಜನೆಯನ್ನು ಇಂದು ಪೂರ್ವ ವಲಯ ವ್ಯಾಪ್ತಿಯ ಇನ್ನಿತರೆ ಪ್ರಾಥಮಿ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗಿದೆ. ಈ ರೀತಿ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾದದ್ದು ಎಂದು ತಿಳಿಸಿದರು.
ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಜನರಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಪ್ರಾರಂಭಿಸಿದ್ದ ಇ-ಸಂಜೀವಿನಿ ಯೋಜನೆಯು ಇಂದು ಪೂರ್ವ ವಲಯದ ಹೆಬ್ಬಾಳ, ಪುಲಕೇಶಿನಗರ ಹಾಗೂ ಶಿವಾಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲಾಗಿದೆ. ಇದನ್ನು ಇನ್ನಿತರ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಅಟ್ರಾಸಿಟಿ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಕಡಿಮೆ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ
ಈ ಯೋಜನೆಯಿಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ನೀಡಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ, ಎನ್‌ಎನ್‌ಎಂ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇಮ್ಯುನೈಸೇಷನ್, ವಿಶೇಷ ಆರೋಗ್ಯ ಶಿಬಿರ, ಪೌಷ್ಟಿಕ ಕಾರ್ಯಕ್ರಮ, ಲಸಿಕೆ ಹಾಕುವುದು, ಸಮೀಕ್ಷೆ ಮಾಡುವುದು ಸೇರಿದಂತೆ ಇನ್ನಿತರ ವೈದ್ಯಕೀಯ ಇಲಾಖೆಯ ಕಾರ್ಯಗಳಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದರು.