ಮೈಸೂರು:ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ, ತನ್ನ ಎದುರು ಮನೆಯ ಒಬ್ಬರನ್ನು ಕೊಂದಿದ್ದು ಮಾತ್ರವಲ್ಲದೇ, ತನ್ನ ಗರ್ಭಿಣಿ ಪತ್ನಿ ಸೇರಿದಂತೆ ಐವರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಈರಯ್ಯ ಎಂಬಾತ ಕೃತ್ಯ ನಡೆಸಿದ್ದು, ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈರಯ್ಯನ ಎದುರು ಮನೆಯ ನಿಂಗಮ್ಮ ಹಲ್ಲೆಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂಗಮ್ಮನ ಪತಿ ಮಾದಯ್ಯ, ಈರಯ್ಯನ ಎರಡನೇ ಹೆಂಡತಿ ಮಹದೇವಮ್ಮ ಹಾಗೂ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ಸುಮಾರು ವರ್ಷಗಳ ಹಿಂದೆ ಮೊದಲನೇ ಪತ್ನಿಯನ್ನು ಕೊಂದು ಜೈಲಿನಿಂದ ಹೊರ ಬಂದಿದ್ದು, ಇಂದು ಕುಡಿತದ ಅಮಲಿನಲ್ಲಿ ಕೊಲೆಗೈದಿದ್ದಾನೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.