ಮೈಸೂರು : ನೂರಾರು ಕನಸು ಹೊತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದವಳು ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಬಲಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ನಾಗರಾಜ ನಾಯಕ ಎಂಬುವರು ತಮ್ಮ ನಾಲ್ಕನೇ ಪುತ್ರಿ ಆಶಾರಾಣಿಯನ್ನ ಮೈಸೂರಿನ ಶ್ರೀರಾಂಪುರ ಎರಡನೇ ಹಂತದಲ್ಲಿರುವ ಎಸ್ಬಿಎಂ ಕಾಲೋನಿಯ ಸಾಫ್ಟ್‌ವೇರ್ ಎಂಜಿನಿಯರ್ ಎಂ.ಸಿ.ಪ್ರದೀಪ್ ಎಂಬಾತನೊಂದಿಗೆ ಕಳೆದ ತಿಂಗಳ 4ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು.
ಸಾಪ್ಟವೇರ್ ಗಂಡನ ಧನದಾಹಕ್ಕೆ ನೂರಾರು ಕನಸು ಹೊತ್ತಿದ್ದವಳು ಬಲಿ ಆದ್ರೆ, ಆಶಾರಾಣಿ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಾಗಿನಿಂದಲೂ ಪ್ರದೀಪ್ ಹಾಗೂ ಆತನ ತಾಯಿ ಸರೋಜಮ್ಮ ಸೇರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ತಾಳಿಗೆ ಚಿನ್ನದ ಕಾಸು ಹಾಕಿಸಿಕೊಂಡು ಬಂದಿಲ್ಲ ಅಂತ ನಿಂದನೆ ಮಾಡುತ್ತಿದ್ದರು ಅಂತ ಸಂಬಂಧಿಕರು ಆರೋಪಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಚಿನ್ನದ ಅಂಗಡಿಗಳು ಬಂದ್ ಆಗಿವೆ, ತೆರೆದ ನಂತರ ಕೊಡಿಸ್ತೀವಿ ಅಂತ ಆಶಾರಾಣಿ ಪೋಷಕರು ಹೇಳಿದ್ದರು. ಆದರೂ ಒಪ್ಪದ ಗಂಡ ಮತ್ತು ಅತ್ತೆ ಚಿತ್ರಹಿಂಸೆ ನೀಡುತ್ತಿದ್ದರಂತೆ. ಮದುವೆ ಸಂದರ್ಭಗಳಲ್ಲಿ 130 ಗ್ರಾಂ ಚಿನ್ನ, ಐದು ಲಕ್ಷ ನಗದನ್ನ ವರದಕ್ಷಿಣೆಯಾಗಿ ನೀಡಿದ್ದರಂತೆ.
ನಾನು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರೂ, ಮಗಳು ಚೆನ್ನಾಗಿರಲಿ ಅಂತ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಮದುವೆ ಮಾಡಿಕೊಟ್ಟೆ. ಅಳಿಯನ ಮನೆಯವರು ಕೇಳಿದಷ್ಟು ಕೊಟ್ಟು ಮದುವೆ ಮಾಡಿದ್ದೆವು. ಆದರೆ, ಮದುವೆಯಾದ ದಿನದಿಂದಲೇ ಎಂತಹ ತಿರುಪೆ ಮನೆಯಿಂದ ಸೊಸೆ ತಂದೆವು ಅಂತ ಆಶಾರಾಣಿ ಅತ್ತೆ ಸರೋಜ ಬೈಯ್ಯುತ್ತಿದ್ದರು. ಗಂಡ ಪ್ರದೀಪ್ ಕೂಡ ಇದಕ್ಕೆ ಸಾಥ್ ನೀಡುತ್ತಿದ್ದ. ಈ ಬಗ್ಗೆ ಆಶಾರಾಣಿ ಕೂಡ ತಿಳಿಸಿದ್ದಳು. ಈಗ ನನ್ನ ಮಗಳನ್ನ ಹಣಕ್ಕಾಗಿ ಹೊಡೆದು ನೇಣಿಗೆ ಹಾಕಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿ ಅಂತ ಆಶಾರಾಣಿ ಪೋಷಕರು ಒತ್ತಾಯಿಸಿದ್ದಾರೆ.
ಗಂಡನ ಮನೆಯವರ ಧನ ದಾಹಕ್ಕೆ ಉತ್ತಮ ಭವಿಷ್ಯದ ಕನಸು ಕಂಡಿದ್ದ ಯುವತಿಯ ಬದುಕು ಕಮರಿ ಹೋಗಿದೆ. ಸಂಸಾರಿಕ ಸುಖ ಅನುಭವಿಸಿ ಬದುಕಿ ಬಾಳಬೇಕಿದ್ದವಳು ಮದುವೆಯಾದ ಒಂದೇ ತಿಂಗಳಿಗೆ ಮಸಣ ಸೇರಿದ್ದು ನಿಜಕ್ಕೂ ದುರಂತವೇ ಸರಿ.