ಮೈಸೂರು: ರಸ್ತೆಯಲ್ಲಿ ತೆರಳುತ್ತಿದ್ದ ಪಾದಚಾರಿಗಳ ಮೇಲೆ ಹುಚ್ಚು ನಾಯಿಗಳು ದಾಳಿ ನಡೆಸಿ 30ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ಜನರು ತೆರಳುತ್ತಿದ್ದಾಗ ಹುಚ್ಚು ನಾಯಿಗಳು ಹಠಾತ್ತನೆ ದಾಳಿ ಮಾಡಿ, 30 ಕ್ಕೂ ಹೆಚ್ಚು ಜನರಿಗೆ ಕಚ್ಚಿವೆ. ಹುಚ್ಚುನಾಯಿ ಕಡಿತಕ್ಕೆ ಒಳಗಾದ ಹಲವು ಮಂದಿ ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಶಾಲಾ ಮಕ್ಕಳು ಸೇರಿದಂತೆ ಇನ್ನೂ 18 ಮಂದಿ ಒಳ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವೃದ್ಧ ಮಹಿಳೆ ಸೇರದಂತೆ 9 ಮಂದಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.