ಕರ್ನಾಟಕ

karnataka

By

Published : Nov 8, 2021, 12:30 PM IST

ETV Bharat / city

ವಿವಾದಕ್ಕೀಡಾಗಿದ್ದ ಮೈಸೂರು ಡಿಡಿಪಿಯು ಹೊರಡಿಸಿದ್ದ ವಸ್ತ್ರ ಸಂಹಿತೆ ಆದೇಶ: 24 ಗಂಟೆಯೊಳಗೆ ವಾಪಸ್

ಮೈಸೂರು ನಗರ ಹಾಗು ಜಿಲ್ಲೆಯಾದ್ಯಂತ ಪದವಿಪೂರ್ವ ಕಾಲೇಜುಗಳ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸದಂತೆ ಹೊರಡಿಸಿದ್ದ ವಸ್ತ್ರ ಸಂಹಿತೆ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಡಿಡಿಪಿಯು ಆದೇಶ ಹಿಂಪಡೆದು ವಿವಾದ ಶಮನಗೊಳಿಸಿದ್ದಾರೆ.

ಡಿಡಿಪಿಯು ಶ್ರೀನಿವಾಸ್ ಮೂರ್ತಿ
ಡಿಡಿಪಿಯು ಶ್ರೀನಿವಾಸ್ ಮೂರ್ತಿ

ಮೈಸೂರು: ನಗರ ಹಾಗು ಜಿಲ್ಲೆಯಾದ್ಯಾಂತ ಪದವಿಪೂರ್ವ ಕಾಲೇಜುಗಳ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸದಂತೆ ಡಿಡಿಪಿಯು ಹೊರಡಿಸಿದ್ದ ವಸ್ತ್ರ ಸಂಹಿತೆ ಆದೇಶ ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ 24 ಗಂಟೆಯೊಳಗೆ ಆದೇಶವನ್ನು ಡಿಡಿಪಿಯು (ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ‌ನಿರ್ದೇಶಕ) ಶ್ರೀನಿವಾಸ್ ಮೂರ್ತಿ ಹಿಂಪಡೆದಿದ್ದಾರೆ.

ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಪ್ರಾಂಶುಪಾಲರು, ಉಪನ್ಯಾಸಕರು ಹಾಗು ಬೋಧಕೇತರ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸದಂತೆ ನಿರ್ಬಂಧ ವಿಧಿಸಿ ಶನಿವಾರ ಶ್ರೀನಿವಾಸ ಮೂರ್ತಿ ಆದೇಶ ಹೊರಡಿಸಿದ್ದರು. ಆದೇಶದಲ್ಲಿ ವಸ್ತ್ರ ಸಂಹಿತೆ ಕುರಿತು ನೌಕರರ ಗಮನಕ್ಕೆ ತರಬೇಕು. ಈ ಬಗ್ಗೆ ಕ್ರಮ‌ ಕೈಗೊಂಡು ನ.10ರೊಳಗೆ ಕಚೇರಿಗೆ ವರದಿ ಸಲ್ಲಿಸುವಂತೆ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು.

ಈ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಬೋಧಕ ಹಾಗು ಬೋಧಕೇತರ ವರ್ಗ ತೀವ್ರವಾಗಿ ಆದೇಶವನ್ನು ವಿರೋಧಿಸಿತ್ತು. ಕೆಲವರು ಜಿಲ್ಲಾಧಿಕಾರಿಗಳ ಗಮನಕ್ಕೂ ಈ ವಿಚಾರ ತಂದಿದ್ದರು. ಸದರಿ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಡಿಡಿಪಿಯು ಆದೇಶ ಹಿಂಪಡೆದು ವಿವಾದ ಶಮನಗೊಳಿಸಿದ್ದಾರೆ.

ಈ‌ ಆದೇಶದ ಬಗ್ಗೆ ಜಿಲ್ಲಾಧಿಕಾರಿ ಡಿ.ಬಗಾದಿ‌ ಗೌತಮ್ ಪ್ರತಿಕ್ರಿಯಿಸಿ, ನಾನು ಈ ರೀತಿಯ ಆದೇಶ‌ ಹೊರಡಿಸುವಂತೆ ಸೂಚಿಸಿಲ್ಲ. ಈ ವಿಚಾರ ಕೇಳಿ ನನಗೂ ಶಾಕ್ ಆಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಯೊಂದಿಗೆ ಮಾತನಾಡಿ, ಈ‌ ವಿಚಾರದಲ್ಲಿ ಏನೋ ತಪ್ಪಾಗಿದೆ. ಈ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದೇನೆ. ನನ್ನ ಗಮನಕ್ಕೆ ಬಾರದೆ ಈ ರೀತಿಯ ಆದೇಶ ಹೊರಡಿಸಿರುವ ಕುರಿತು ಡಿಡಿಪಿಯು ಅವರಿಂದ ಸೂಕ್ತ ಕಾರಣ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಡಿಡಿಪಿಯು ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯಿಸಿ, ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿತ್ತು.‌ ಈ ವಾರ ಜಿಲ್ಲಾಧಿಕಾರಿಯೊಂದಿಗೆ ಸಿಇಟಿ ಸಂಬಂಧ ಸಭೆ ನಡೆಯಲಿದ್ದು, ಆ ಸಭೆಗೆ ಉಪನ್ಯಾಸಕರು ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸಿ ಬಂದರೆ ಮುಜುಗರ ಆಗಬಹುದೆಂದು ಶನಿವಾರ 9 ಗಂಟೆಗೆ ಆದೇಶ ಹೊರಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಆದೇಶ ಹಿಂಪಡೆದಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ‌ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details