ಮೈಸೂರು :ನಾನು ಜಿಲ್ಲಾಧಿಕಾರಿ, ನಾನು ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂಬ ಇಗೋ ಇಲ್ಲದೆ, ಎಲ್ಲರೊಂದಿಗೂ ಬೆರೆತು ಕೆಲಸ ಮಾಡುವ ಜಿಲ್ಲಾಧಿಕಾರಿಗಳು ಅಂದ್ರೆ ಅದು ಡಾ.ಬಗಾದಿ ಗೌತಮ್ ಐಪಿಎಸ್ ಎಂದು ಮೈಸೂರು ನೂತನ ಡಿಸಿ ಕುರಿತು ಮೆಚ್ಚುಗೆ ಮಾತುಗಳನ್ನಾಡುತ್ತಾ ಪರೋಕ್ಷವಾಗಿ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಚಿವ ಎಸ್ ಟಿ ಸೋಮಶೇಖರ್ ಅವರು ಟಾಂಗ್ ನೀಡಿದರು.
ನೂತನ ಜಿಲ್ಲಾಧಿಕಾರಿಗಳಿಗೆ ಇಗೋ ಇಲ್ಲ.. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕೆಂದು ಎಲ್ಲಾ ಶಾಸಕರು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವೈದ್ಯರುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಈ ಮಧ್ಯೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಯಾವುದೇ ಅಹಂಕಾರ ಇಲ್ಲದೆ ಇವರ ಮಧ್ಯೆಯೇ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ನನಗೆ ಖುಷಿ ತಂದಿದೆ ಎಂದು ನೂತನ ಡಿಸಿಯವರನ್ನು ಹಾಡಿ ಹೊಗಳಿದರು.
ಜೂನ್-21ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಮೈಸೂರು ಜಿಲ್ಲೆಗೆ ಹೆಚ್ಚಿನ ಲಸಿಕೆ ನೀಡುವಂತೆ ಕೇಳಿದ್ದೇನೆ. ಇನ್ನೂ, ಜೂನ್ 21ರ ನಂತರ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಸರ್ಕಾರ ಸಭೆಯ ನಂತರ ತೀರ್ಮಾನ ಕೈಗೊಳ್ಳಲಿದೆ.
ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳ ನಿರ್ಧಾರ ಪಡೆದು ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಹೇಳಿದರು.