ಬೆಂಗಳೂರು :ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಈಗಾಗಲೇ ಎಲ್ಲ ರೀತಿಯ ಸಕಲ ತಯಾರಿ ಆರಂಭಗೊಂಡಿದೆ. ಈ ಸಲದ ಉದ್ಘಾಟಕರು ಯಾರು ಎಂಬ ಗೊಂದಲಕ್ಕೆ ಕೊನೆಗೂ ಸಿಎಂ ಬಸವರಾಜ್ ಬೊಮ್ಮಾಯಿ ತೆರೆ ಎಳೆದಿದ್ದಾರೆ.
ಈ ಬಾರಿಯ ದಸರಾ ಉತ್ಸವದ ಉದ್ಘಾಟಕರಾಗಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು, ಅಧಿಕೃತವಾಗಿ ಆಹ್ವಾನ ನೀಡುವ ನಿರ್ಧಾರ ಪ್ರಕಟಿಸಿದೆ. ಆ ಮೂಲಕ ರಾಜಕೀಯ ವ್ಯಕ್ತಿಯನ್ನು ಉದ್ಘಾಟಕರಾಗಿ ಆಯ್ಕೆ ಮಾಡಿದೆ.
ಸುದ್ದಿಗೋಷ್ಠಿ ವೇಳೆ ಮಾಹಿತಿ ಹಂಚಿಕೊಂಡ ಸಿಎಂ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ದಸರಾ ಉತ್ಸವ ಕುರಿತು ನಡೆದ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಸರಾ ಮಹೋತ್ಸವ ಉದ್ಘಾಟನೆ ಮಾಡಲು ಮತ್ತು ಚಾಮುಂಡೇಶ್ವರಿ ಪೂಜೆ ಮಾಡಲು ಈ ಬಾರಿ ಎಸ್ಎಂ ಕೃಷ್ಣ ಅವರನ್ನು ಮುಖ್ಯ ಅತಿಥಿಗಳಾಗಿ ಆಯ್ಕೆ ಮಾಡಲಾಗಿದೆ. ಕೃಷ್ಣ ಅವರಿಂದ ಚಾಮುಂಡೇಶ್ವರಿ ಪೂಜೆ ಮಾಡಲು ಮತ್ತು ದಸರಾ ಮಹೋತ್ಸವದ ಉದ್ಘಾಟಕರಾಗಿ ಅವರನ್ನು ಆಹ್ವಾನಿಸಲು ನಿರ್ಧರಿಸಿದ್ದೇವೆ ಎಂದರು.
ರಾಜಕೀಯ ವ್ಯಕ್ತಿಗಳನ್ನು ದಸರಾ ಉದ್ಘಾಟನೆಗೆ ಆಹ್ವಾನ ಮಾಡುವ ಪರಂಪರೆ ಇಲ್ಲ, ಎಸ್.ಎಂ ಕೃಷ್ಣ ಕೇವಲ ರಾಜಕಾರಣಿಯಲ್ಲ, ಅವರು ಮುತ್ಸದಿಗಳು ಮತ್ತು ಹಲವಾರು ಹುದ್ದೆಗಳಲ್ಲಿ ಇದ್ದಾಗ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಅವರ ಯೋಗದಾನ ಬಹಳ ದೊಡ್ಡದಿದೆ ಹೀಗಾಗಿ ಅವರನ್ನು ದಸರಾ ಉದ್ಘಾಟಕರಾಗಿ ಆಮಂತ್ರಿಸಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಕೃಷ್ಣ ಆಯ್ಕೆಯನ್ನು ಸಿಎಂ ಸಮರ್ಥಿಸಿಕೊಂಡರು. ಅಕ್ಟೋಬರ್ 7ರಿಂದ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ.