ಮೈಸೂರು : ವಿಧಾನ ಪರಿಷತ್ ಚುನಾವಣೆಯ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಪಡುವಾರಹಳ್ಳಿ ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಭದ್ರತಾ ಕೊಠಡಿಯಲ್ಲಿ ಮೊಹರು ಮಾಡಿ ಇರಿಸಲಾಗಿದ್ದ ಮತಪೆಟ್ಟಿಗೆಗಳನ್ನು ಬೆಳಗ್ಗೆ 7.45 ಗಂಟೆಗೆ ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಏಜೆಂಟರುಗಳು ಉಪಸ್ಥಿತಿಯಲ್ಲಿ ತೆರೆಯಲಾಯಿತು. ಬಳಿಕ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಿಸಲಾಯಿತು.
ಮತ ಎಣಿಕೆಗಾಗಿ 14 ಎಣಿಕೆ ಟೇಬಲ್‌ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಟೇಬಲ್‌ಗೆ ಒಬ್ಬ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. 14 ಎಣಿಕೆ ಟೇಬಲ್‌ಗಳಿಗೆ ಅಭ್ಯರ್ಥಿಗಳು ತಲಾ ಒಬ್ಬರಂತೆ 14 ಜನ ಎಣಿಕೆ ಏಜೆಂಟರುಗಳನ್ನು ನೇಮಿಸಿಕೊಂಡಿದ್ದಾರೆ. ಪ್ರಾರಂಭಿಕ ಎಣಿಕೆಯು ಎಣಿಕೆ ಟೇಬಲ್‌ಗಳಲ್ಲಿ ನಡೆದು ತದನಂತರ ಎಣಿಕೆ ಪ್ರಕ್ರಿಯೆ ಚುನಾವಣಾಧಿಕಾರಿಗಳ ಟೇಬಲ್‌ನಲ್ಲಿ ನಡೆಯುತ್ತದೆ. ಮತ ಎಣಿಕೆ ಕೇಂದ್ರದ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
99.73 ರಷ್ಟು ಮತದಾನ :ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದ ಒಟ್ಟು 393 ಮತಕೇಂದ್ರದಲ್ಲಿ ಒಟ್ಟು 6787 ಮತದಾರರಿದ್ದು, ಈ ಪೈಕಿ 6769 ಮತದಾರರು ಮತಚಲಾಯಿಸಿದ್ದರು.
ತ್ರಿಕೋನ ಸ್ಪರ್ಧೆ :ಮೈಸೂರು- ಚಾಮರಾಜನಗರ ದ್ವಿ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯಿಂದ ಕೌಟಿಲ್ಯ ರಘು, ಕಾಂಗ್ರೆಸ್ ನಿಂದ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನಿಂದ ಸಿ.ಎನ್. ಮಂಜೇಗೌಡ ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅಖಾಡದಲ್ಲಿದ್ದು, ಅವರು ಎಷ್ಟು ಮತ ಪಡೆಯುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸಂಜೆ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.