ಕರ್ನಾಟಕ

karnataka

ETV Bharat / city

ಮೈಸೂರು ದಶಪಥ ಹೆದ್ದಾರಿ ನಿರ್ಮಾಣ, ಸಾಂಸ್ಕೃತಿಕ ನಗರಿಗೆ ಸಿಗಲಿದೆ ಅಭಿವೃದ್ಧಿಯ ವೇಗ - ಮೈಸೂರಿನ ಭವಿಷ್ಯ ಬದಲಾಗಲಿದೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿಯುವ ಹಂತ ತಲುಪಿದ್ದು, ಈ ಹೆದ್ದಾರಿ ನಿರ್ಮಾಣದಿಂದ ಮೈಸೂರಿನ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೋಟೆಲ್​, ಐಟಿ, ಪ್ರವಾಸೋದ್ಯಮಗಳ ಬೆಳವಣಿಗೆ ನಿರೀಕ್ಷೆ ಇದೆ.

Mysore Bangalore ten line Highway
ಮೈಸೂರು ದಶಪಥ ಹೆದ್ದಾರಿ ನಿರ್ಮಾಣ, ಸಾಂಸ್ಕೃತಿಕ ನಗರಿಗೆ ಸಿಗಲಿದೆ ಅಭಿವೃದ್ಧಿಯ ವೇಗ

By

Published : Jun 3, 2022, 7:15 PM IST

ಮೈಸೂರು: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯು ವೇಗ ಪಡೆದುಕೊಂಡಿದ್ದು ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಬೃಹತ್ ಕೈಗಾರಿಕೆಗಳು ಸಾಂಸ್ಕೃತಿಕ ನಗರಿಗೆ ಬರಲು ಈ ದಶಪಥ ಹೆದ್ದಾರಿಯು ರತ್ನಗಂಬಳಿ ಹಾಸಲಿದೆ. ಈ ದಶಪಥ ಹೆದ್ದಾರಿಯು ಮೈಸೂರನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕರೆದೊಯ್ಯಲಿದ್ದು ಸುಗಮ ಸಂಚಾರದ ವ್ಯವಸ್ಥೆಯಿಂದ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಅದಷ್ಟೇ ಅಲ್ಲದೆ ಕೈಗಾರಿಕೋದ್ಯಮ, ರಿಯಲ್ ಎಸ್ಟೇಟ್ ಉದ್ಯಮ, ಐಟಿ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು ಬೃಹತ್ ಕೈಗಾರಿಕೆಗಳು ಕೂಡ ಸಾಂಸ್ಕೃತಿಕ ನಗರಿಯತ್ತ ಬರಲು ರತ್ನಗಂಬಳಿಯನ್ನ ದಶಪಥ ಹೆದ್ದಾರಿ ಹಾಸಲಿದೆ.

ಎಕ್ಸ್ಪ್ರೆಸ್ ಹೈವೇಯಿಂದ ಬದಲಾಗಲಿದೆ ಮೈಸೂರಿನ ಭವಿಷ್ಯ:ಈ ದಶಪಥ ರಸ್ತೆ ನಗರವು ಮತ್ತಷ್ಟು ಸುಂದರವಾಗಿ ಕಾಣಲು ಹಾಗೂ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಹಾಯಕವಾಗಿದೆ, ರಸ್ತೆ, ನೀರು ಕೈಗಾರಿಕೆ ಸ್ಥಾಪಿಸಲು ಭೂಮಿ, ದುಡಿಯಲು ಕಾರ್ಮಿಕರು ಹಾಗೂ ಯುವ ಸಮೂಹ ಬೇಕು. ಬೆಂಗಳೂರು ಪಕ್ಕದಲ್ಲಿರುವ ಎರಡನೇ ಕೈಗಾರಿಕಾ ಹಬ್ ಆಗಿರುವ ಮೈಸೂರು. ಸಾರಿಗೆ ಸಮಸ್ಯೆಯಿಂದ ಹಿಂದೆ ಬಿದ್ದಿತ್ತು. ಎಕ್ಸ್ಪ್ರೆಸ್ ಹೈವೇ ಇದನ್ನು ಮರೆಮಾಚಿ ಹೊಸ ಉತ್ಸಾಹ ನೀಡಿ ಮೈಸೂರಿನ ಭವಿಷ್ಯವನ್ನು ಬದಲಿಸಲಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ

ದಶಪಥ ರಸ್ತೆಯಲ್ಲಿ 6 ಪಥದ ಎಕ್ಸ್​​​ಪ್ರೆಸ್​​​​ ಹೈವೇ:ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ರಸ್ತೆಯಲ್ಲಿ 6 ಪಥದ ಎಕ್ಸ್​​​​ಪ್ರೆಸ್​​ ಹೈವೇ ಇರಲಿದ್ದು, ಆ ಆರರಲ್ಲಿ ಮೂರು ಬೆಂಗಳೂರಿನ ಕಡೆ ಮೂರು ಮೈಸೂರಿನ ಕಡೆ ಇರಲಿದೆ. ಇನ್ನೆರಡು ಕಡೆ ಸರ್ವಿಸ್ ರಸ್ತೆ ಇರಲಿದ್ದು 9,551 ಕೋಟಿ ರೂ. ವೆಚ್ಚದಲ್ಲಿ 118 ಕಿಮೀ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ 8,350 ಕೋಟಿ ರೂ.ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು 1,201 ಕೋಟಿ ರೂ. ಮಂಜೂರಾಗಿದೆ. ಅಕ್ಟೋಬರ್​ನವರೆಗೆ ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ.

ಶೇ. 99ರಷ್ಟು ಹೆದ್ದಾರಿ ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗಿದೆ:ಶೇ.99ರಷ್ಟು ಹೆದ್ದಾರಿ ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಹಾದುಹೋಗಿದ್ದು, ಬೆಂಗಳೂರಿನಿಂದ ನಿಡಘಟ್ಟದವರೆಗೆ ಜುಲೈ ಅಂತ್ಯದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವರೆಗೆ ಒಟ್ಟು 118 ಕಿ.ಮೀ ರಸ್ತೆ ಪೂರ್ಣಗೊಂಡು ದಸರಾ ಸಂದರ್ಭದಲ್ಲಿ ಉದ್ಘಾಟನೆಯಾಗಲಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ

ಹೆದ್ದಾರಿಯ ವಿಶೇಷತೆಗಳು:ದಶಪಥ ಹೆದ್ದಾರಿಯಲ್ಲಿ ಮೊದಲ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್ ಅಗಲ ಇದ್ದು, ಇದನ್ನ 60 ಮೀಟರ್​ಗೆ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್​ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು - ಮೈಸೂರು ನಡುವೆ ಸದ್ಯ 135 ಕಿಲೋಮೀಟರ್ ಅಂತರವಿದ್ದು, ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು, ಮೈಸೂರಿನ ಹೊರವಲಯದಲ್ಲಿ ಮುಕ್ತಾಯಗೊಳ್ಳಲಿದೆ.

ಆರು ಪಥದ ಎಕ್ಸ್​​​ಪ್ರೆಸ್​​​​ ವೇ ಉದ್ದಕ್ಕೂ ಎರಡು ಬದಿಯಲ್ಲಿ 6 ಅಡಿ ಎತ್ತರದಲ್ಲಿ ಚೈನ್ ಲಿಂಕ್ ಬೇಲಿ ನಿರ್ಮಾಣವಾಗಲಿದ್ದು, ಬಿಡದಿ ರಾಮನಗರ-ಚನ್ನಪಟ್ಟಣ ಮದ್ದೂರು ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಮಾತ್ರ ಪ್ರವೇಶ ಹಾಗೂ ನಿರ್ಗಮನ ದ್ವಾರ ಇರುತ್ತದೆ. ಉಳಿದ ಕಡೆಗಳಲ್ಲಿ ಸಂಪೂರ್ಣವಾಗಿ ಚೈನ್ ಲಿಂಕ್ ಇರಲಿದೆ. ಇದರಿಂದ ಜನ - ಜಾನುವಾರುಗಳು ಪ್ರವೇಶಿಸಲು, ಮಧ್ಯದಲ್ಲಿ ವಾಹನಗಳು ಬೇರೆಡೆ ಹೋಗಲು ಅವಕಾಶ ಇರುವುದಿಲ್ಲ.

ಮೈಸೂರಿನ ಭವಿಷ್ಯ ಬದಲಾಗಲಿದೆ:ಸಂಸದ ಪ್ರತಾಪ್ ಸಿಂಹ ಮಾತನಾಡಿ, ದಶಪಥ ಹೆದ್ದಾರಿಯಿಂದ ಮೈಸೂರಿಗೆ ಅನುಕೂಲವಾಗಲಿದ್ದು, ಮೈಸೂರಿನ ಭವಿಷ್ಯವೇ ಬದಲಾಗಲಿದೆ. ಉದ್ಯಮ, ಐಟಿ ಕ್ಷೇತ್ರ ಬೆಳೆಯಲು ಶುರುವಾದಂತೆ ಅಂತಾರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣ ಕೂಡ ಅಗತ್ಯವಾಗುತ್ತದೆ. ರೈಲ್ವೆ ಇಲಾಖೆಯ ಇನ್ಲಾಂಡ್ ಕಂಟೇನರ್ ಡಿಪೋ ಕೂಡ ತಲೆಯೆತ್ತಲಿದೆ. ಆಗ ಮೈಸೂರನ್ನು ಹೊರಜಗತ್ತು ನೋಡುವ ದೃಷ್ಟಿಕೋನವೇ ಬದಲಾಗಲಿದೆ. ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶ ದೊರೆಯಲಿದ್ದು, ಈ ಭಾಗದ ಬಹುತೇಕ ಯುವಜನರು ಉದ್ಯೋಗಕ್ಕೆ ಬೇರೆ ಕಡೆ ಹೋಗುವುದು ತಪ್ಪಲಿದೆ ಕುಟುಂಬಗಳ ವರಮಾನವು ಕೂಡ ತೀವ್ರಗತಿಯಲ್ಲಿ ಹೆಚ್ಚಾಗಲಿದೆ ಎನ್ನುತ್ತಾರೆ.

ನಗರದ ಚಿತ್ರಣ ಶೀಘ್ರವೇ ಬದಲಾಗಲಿದೆ:ದಶ ಪಥದಿಂದ ಆರ್ಥಿಕ ಪುನಶ್ಚೇತನವಾಗಿ ಮೈಸೂರು ಹೊಸ ದಿಕ್ಕಿನತ್ತ ಸಾಗಿ ಅಲ್ಲಿನ ಚಿತ್ರಣವೇ ಬದಲಾಗಿದೆ. ಸಾಗಣೆ ಸಮಸ್ಯೆಯಿಂದಾಗಿ ಮೈಸೂರಿನ ಉದ್ಯಮ ಉತ್ಪಾದನೆಯ ಮೇಲೆ ಹೊಡೆತ ಬಿದ್ದಿತ್ತು. ಈ ಯೋಜನೆಯಿಂದ ಸನ್ನಿವೇಶ ಬದಲಾಗಲಿದೆ. ರಾಜಧಾನಿ ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಸರಕು ಸಾಗಣೆಯ ಕೂಡ ಸರಾಗವಾಗಿ ಆಗಲಿದೆ. ಪ್ರಯಾಣ ದೂರವು ಕೂಡ ತಗಲಿದ್ದು, ಅದರಿಂದ ಆರ್ಥಿಕವಾಗಿ ಉಳಿತಾಯವಾಗಲಿದೆ. ಉದ್ಯಮಿಗಳು ಸ್ವಂತ ವಾಹನದಲ್ಲಿ ಹೋಗುವುದರಿಂದ ಅವರಿಗೆ ಇನ್ನೂ ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾ ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ಕುಮಾರ್ ಜೈನ್ ಹೇಳುತ್ತಾರೆ.

ದಶಪಥ ರಸ್ತೆಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ:ನಗರಕ್ಕೆ ಬರುವ ಉದ್ಯಮಿಗಳು ಪ್ರವಾಸಿಗರ ಸಂಖ್ಯೆ ಈ ದಶಪಥ ಹೆದ್ದಾರಿಯಿಂದ ಹೆಚ್ಚಾಗಲಿದ್ದು, ಇಲ್ಲಿ ವಾಸಕ್ಕಾಗಿ ಬರುವವರು ಕೂಡ ಹೆಚ್ಚಾಗುವುದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಲಿದೆ. ಹೋಟೆಲ್ ಉದ್ಯಮ ಕೂಡ ಬೆಳೆಯಲಿದೆ, ತಡರಾತ್ರಿ ಊಟಕ್ಕಾಗಿ ಪರವಾನಗಿ ಪಡೆದುಬರುವ ಪ್ರಯಾಣಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದರೆ ಕಲಾವಿದರಿಗೂ ಅನುಕೂಲವಾಗಲಿದೆ. ಪ್ರವಾಸಿಗರೂ ಕೂಡ ಖುಷಿಪಡುತ್ತಾರೆ. ವಾಹನ ಸಂಚಾರಕ್ಕೆ ಸಮಯ ಉಳಿತಾಯವಾಗಲಿದೆ ಎನ್ನುತ್ತಾರೆ ಮೈಸೂರು ಟ್ರಾವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ:ಉದ್ಯಮಿ ಚಂದ್ರು ನಿತ್ಯಾನಂದ ಅವರು,ದಶಪಥ ಹೆದ್ದಾರಿಯಿಂದ ಮೈಸೂರಿನ ಬಹುತೇಕ ವ್ಯವಹಾರಗಳು ಹೊಸದಿಕ್ಕು ಕಾಣಲಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗಲಿದ್ದು ಕೈಗಾರಿಕೆಗಳಿಗೆ ಮತ್ತಷ್ಟು ಸೌಲಭ್ಯ ನೀಡಿದರೆ ಉದ್ಯಮಗಳು ಆರಂಭವಾಗಿ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ, ಜನರ ಜೀವನ ಮಟ್ಟ ಸುಧಾರಿಸಲಿದೆ ಎನ್ನುತ್ತಾರೆ.

ಇದನ್ನೂ ಓದಿ:ಶಿಕ್ಷಕ - ಪದವೀಧರ ಕ್ಷೇತ್ರದ ಚುನಾವಣೆ ಮತದಾನದ ಅವಧಿ ವಿಸ್ತರಿಸಿ: ಬಿಜೆಪಿ ಮನವಿ

ABOUT THE AUTHOR

...view details