ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಆಚರಣೆ ಸರಳವಾಗಿದ್ದರೂ, ಕ್ರೈಸ್ತ ಬಾಂಧವರಲ್ಲಿ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಚರ್ಚ್ ಸೇರಿದಂತೆ ವಿವಿಧ ಪ್ರಾರ್ಥನಾ ಮಂದಿರಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಕಳೆಗಟ್ಟಿದೆ.
ಮೈಸೂರಿನಲ್ಲಿ ಸರಳ ಕ್ರಿಸ್‌ಮಸ್ ಆಚರಣೆ: ಬಿಷಪ್ ಡಾ.ಕೆ.ಎ.ವಿಲಿಯಂ ಪ್ರತಿಕ್ರಿಯೆ ಒಮಿಕ್ರಾನ್ ಹಾಗೂ ಕೋವಿಡ್ ಆತಂಕದ ನಡುವೆ ಚರ್ಚ್‌ಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬಿಷಪ್ ಕೆ. ಎ. ವಿಲಿಯಂ ಚಾಲನೆ ನೀಡಿದರು.
ಚರ್ಚ್‌ನ ಪರಿವಾರದೊಂದಿಗೆ ಛತ್ರಿಚಾಮರಗಳ ಹಿಮ್ಮೇಳದೊಂದಿಗೆ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ಚರ್ಚ್‌ಗೆ ಬಲಿಪೂಜೆ ಮಾಡಲಾಯಿತು. ಬಳಿಕ ಏಸುವಿನ ಜನನ, ಬಾಲ್ಯ, ಬದುಕನ್ನು ತಿಳಿಸುವ ಚಿತ್ರಣವನ್ನು ಸಾರಲಾಯಿತು. ಏಸು ಗೀತೆ ಹಾಡುವ ಮೂಲಕ ಕ್ರೈಸ್ತ ಬಾಂಧವರು ಹಬ್ಬದ ಮೆರುಗನ್ನು ಹೆಚ್ಚಿಸಿದರು. ಸೆಂಟ್ ಫಿಲೋಮಿನಾ ಚರ್ಚ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ. ಎ. ವಿಲಿಯಂ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಚರ್ಚ್‌ಗೆ ಆಗಮಿಸಿದ ಭಕ್ತರು ಏಸುವಿನ ಮೂರ್ತಿ ಕಣ್ತುಂಬಿಕೊಂಡರು. ವಿಶೇಷ ಅಲಂಕಾರದಿಂದ ಫಿಲೋಮಿನಾ ಚರ್ಚ್ ಕಂಗೊಳಿಸಿದೆ. ಕುಟುಂಬ ಸಮೇತರಾಗಿ ಚರ್ಚ್‌ಗೆ ಬಂದ ಭಕ್ತರು ಏಸುವಿಗೆ ಮೇಣದ ಬತ್ತಿ ಹಚ್ಚಿ ದೇವದೂತನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿದರು. ಬಳಿಕ ಕೇಕ್ ಮತ್ತು ಇನ್ನಿತರೆ ಸಿಹಿ ತಿನಿಸುಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಹಬ್ಬದ ಶುಭಾಶಯ ಕೋರಿದರು. ಹಬ್ಬದ ಪ್ರಯುಕ್ತ ಕರೋಲ್ ಕ್ರೈಸ್ತ ಗೀತೆಗಳನ್ನು ಹಾಡಲಾಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಷಪ್ ಡಾ.ಕೆ.ಎ.ವಿಲಿಯಂ, ಕ್ರಿಸ್‌ಮಸ್ ಹಬ್ಬದಲ್ಲಿ ಕ್ರೈಸ್ತರು ಶಾಂತಿ ನೆಮ್ಮದಿಯನ್ನು ಬಯಸುವ ಜತೆಗೆ, ಅಂದು ಉಳ್ಳವರು ತಮ್ಮ ಬಳಿಯಿರುವ ಸಂಪನ್ಮೂಲವನ್ನು ಬಡವರಿಗೆ ಹಾಗೂ ಪುಟ್ಟ ಮಕ್ಕಳಿಗೆ ದಾನ ಮಾಡುತ್ತಾರೆ. ಇದರಿಂದ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದರು.
ಕ್ರಿಸ್‌ಮಸ್ ಹಬ್ಬ ಆಚರಣೆಯ ಅಂಗವಾಗಿ ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಇತರರಿಗೆ ಸಿಹಿ ಹಂಚುವ ಮೂಲಕ ಸಂಪನ್ಮೂಲವನ್ನು ಹಂಚಿ ತಿನ್ನಿ ಎಂಬ ಸಂದೇಶ ಸಾರಿದರು.
ಇದನ್ನೂ ಓದಿ:ಮಂಗಳೂರಿನಲ್ಲಿ ಸರಳ ಕ್ರಿಸ್‌ಮಸ್ ಆಚರಣೆ : ಕೊರೊನಾ ಮುಕ್ತ ವಿಶ್ವಕ್ಕಾಗಿ ಪ್ರಾರ್ಥನೆ