ಮೈಸೂರು: ನೂತನವಾಗಿ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರು ಸರಬರಾಜು ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದಾದ ಅವಘಡ ತಪ್ಪಿಸಲು ಬಂದ ಅಗ್ನಿಶಾಮಕ ದಳದ 6 ಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ತಿ.ನರಸೀಪುರ ಪುರಸಭೆಯಲ್ಲಿ ನಿರ್ಮಿಸಲಾಗಿದ್ದ ನೀರು ಸರಬರಾಜು ಘಟಕದಲ್ಲಿ ಮಂಗಳವಾರ ರಾತ್ರಿ ಕ್ಲೋರಿನ್ ಸೋರಿಕೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕ್ಲೋರಿನ್ ಅನಿಲ ಸೋರಿಕೆ ತಪ್ಪಿಸಲು ಸುಣ್ಣದ ನೀರನ್ನು ಮಿಶ್ರಣ ಮಾಡಿಕೊಂಡು ನೀರು ಶುದ್ಧೀಕರಣ ಘಟಕದ ಬಳಿ ತೆರಳಿದಾಗ 50 ಮೀಟರ್ ದೂರದಲ್ಲಿಯೇ ಅನಿಲದ ವಾಸನೆ ಬಂದ ಪರಿಣಾಮ 6 ಮಂದಿ ಅಸ್ವಸ್ಥಗೊಂಡಿದ್ದಾರೆ.
ದರ್ಶನ್, ಪ್ರದೀಪ್, ಕಿಶೋರ್, ನಾಗರಾಜ್, ಯೋಗೇಶ್, ನಿಜಗುಣ ಎಂಬುವವರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಶಾಸಕ ಅಶ್ವಿನ್ ಕುಮಾರ್, ಡಿಹೆಚ್ಒ ಡಾ.ಕೆ.ಎಚ್. ಪ್ರಸಾದ್ ಅವರು ಸಿಬ್ಬಂದಿಯ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದಾರೆ.