ಮೈಸೂರು:ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸರಗಳ್ಳರು, ಇಬ್ಬರು ದ್ವಿಚಕ್ರ ವಾಹನ ಕಳ್ಳರು ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಮತ್ತು ಮಟ್ಕಾ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ಸರಗಳ್ಳರ ಬಂಧನ:
ಮೈಸೂರಿನಲ್ಲಿ ಸರಗಳ್ಳತನ ಹೆಚ್ಚಾಗಿದ್ದು, ಪ್ರಕರಣ ಭೇದಿಸಲು ಪೊಲೀಸ್ ಆಯುಕ್ತರಿಂದ ರಚಿಸಲಾಗಿದ್ದ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಮೈಸೂರಿನ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕ ವೈನ್ಸ್ ಸೆಂಟರ್ ಮುಂಭಾಗ ಮೂವರು ಸರಗಳ್ಳರನ್ನು ವಶಕ್ಕೆ ಪಡೆದಿದೆ. ಬಂಧಿತರದಿಂದ 100 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ದ್ವಿಚಕ್ರ ವಾಹನ ಕಳ್ಳರ ಸೆರೆ:ನಗರದ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಫ್ಯಾಮಿಲಿ ಶಾಪ್ ಬಟ್ಟೆ ಅಂಗಡಿ ಮುಂಭಾಗ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮೈಸೂರು ನಗರ, ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.