ಮೈಸೂರು : ಮದುವೆ ಆಗುವುದಾಗಿ ನಂಬಿಸಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡು ಬಾರಿ ಗರ್ಭಪಾತ ಮಾಡಿಸಿ, ನಂತರ ಜಾತಿ ನೆಪವೊಡ್ಡಿ ಕೈಕೊಟ್ಟ ಪ್ರಕರಣವೊಂದು ವಿಜಯನಗರದಲ್ಲಿ ಬೆಳಕಿಗೆ ಬಂದಿದೆ. ಕುಂಬಾರ ಕೊಪ್ಪಲಿನ ನಿವಾಸಿ ಗಣೇಶ್ ವಂಚಿಸಿದವ. ಯುವಕನ ನಯ ವಂಚನೆಗೆ ಬೇಸತ್ತ ಯುವತಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ವಿಜಯನಗರದ 20 ವರ್ಷದ ಯುವತಿ ಇದೀಗ ಅತಂತ್ರವಾಗಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಬಾಲಕಿಯಾಗಿದ್ದಾಗ ಪರಿಚಯ ಮಾಡಿಕೊಂಡ ಗಣೇಶ್ ಆಹಾರಕ್ಕೆ ಮಾತ್ರೆ ಬೆರೆಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ತನಗೆ ಅರಿವಿಲ್ಲದೆಯೇ ಬಾಲಕಿ ಗರ್ಭಿಣಿಯಾಗಿದ್ದಾರೆ. ಥೈರಾಯ್ಡ್ ಸಮಸ್ಯೆ ಇರುವುದರಿಂದ ಯುವತಿ ಗರ್ಭಿಣಿ ಎಂದು ಗೊತ್ತಾಗಿಲ್ಲ. ಗರ್ಭಿಣಿ ಎಂದು ಖಚಿತವಾದಾಗ ಮದುವೆಯಾಗುವಂತೆ ಎಂದು ಗಣೇಶ್ನನ್ನು ಕೇಳಿದ್ದಾರೆ. ಮದುವೆಗೆ ನಿರಾಕರಿಸಿದ ಹಿನ್ನಲೆ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.
ಪೋಕ್ಸೋ ಕಾಯ್ದೆ ದಾಖಲಿಸಿದ ಪೊಲೀಸರು ಗಣೇಶ್ನನ್ನ ಜೈಲಿಗೆ ಕಳಿಸಿದ್ದಾರೆ. ಒಂದು ತಿಂಗಳ ನಂತರ ಬೇಲ್ನಿಂದ ಆಚೆ ಬಂದು ಮತ್ತೆ ಪ್ರೀತಿಯ ನಾಟಕ ಆಡಿದ್ದಾನೆ. ಗಣೇಶನ ನಯ ವಂಚಕತನ ಅರಿಯದೆ ಮತ್ತೆ ದೈಹಿಕ ಸಂಪರ್ಕ ಬೆಳೆದು ಮತ್ತೆ ಗರ್ಭಿಣಿ ಆಗಿದ್ದಾರೆ. ಮದುವೆ ವಿಚಾರ ತೆಗೆದಾಗ ಜಾತಿ ನೆಪವೊಡ್ಡಿ ನಿರಾಕರಿಸಿದ್ದಾನೆ. ನಂತರ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತವಾಗುವಂತೆ ಮಾಡಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಯುವತಿ ಚಿಕಿತ್ಸೆ ಪಡೆದಿದ್ದಾರೆ.
ಇದೀಗ ಮದುವೆ ಆಗುವಂತೆ ಮನವಿ ಮಾಡಿದರೂ ಜಾತಿ ನೆಪ ಹೇಳಿ ನುಣುಚಿಕೊಂಡಿದ್ದಾನೆ. ಗಣೇಶ್ ಕುಟುಂಬದವರೂ ಸಹ ಸಹಕರಿಸುತ್ತಿಲ್ಲ. ಅವನು ಮದುವೆ ಆಗದೇ ಇದ್ದರೆ ಸಾಯುತ್ತೇನೆ ಎಂದು ಸಂತ್ರಸ್ಥೆ ನಿರ್ಧರಿಸಿದ್ದಾರೆ. ಯುವತಿಗೆ ವಂಚಿಸಿರುವ ಗಣೇಶ್ ಈ ಹಿಂದೆಯೂ ಒಬ್ಬಳನ್ನ ಪ್ರೀತಿಸಿ ಮದುವೆ ಆಗಿ ಆಕೆಗೂ ಸಹ ಜಾತಿ ನೆಪವೊಡ್ಡಿ ಕೈಕೊಟ್ಟಿರುವುದಾಗಿ ಸಂತ್ರಸ್ಥ ಯುವತಿ ಆರೋಪಿಸಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ನೆಲಮಂಗಲ: ಡ್ರಗ್ಸ್ - ಕಳ್ಳತನದಲ್ಲಿ ತೊಡಗಿದ್ದ 13 ಆರೋಪಿಗಳ ಬಂಧಿಸಿದ ಪೊಲೀಸರು