ಮೈಸೂರು : ಕಾಶಪ್ಪನವರು ಅಂದ್ರೆ ಯಾರು? ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡಿದ್ದನಲ್ಲ ಅವನಾ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಜಯಾನಂದ ಕಾಶಪ್ಪನವರ ವಿರುದ್ಧ ವ್ಯಂಗ್ಯವಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಕಾಶಪ್ಪನವರ್ ಅಂದ್ರೆ ಯಾರು ? ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ ಎಂದರು.
ಕಾಶಪ್ಪನವರು ಅಂದ್ರೆ ಯಾರು, ಬಾರಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲ ಅವರಾ..! ಎಲ್ಲ ಸಮುದಾಯಗಳಿಗೂ ಮೀಸಲಾತಿ ಕೇಳುವ ಹಕ್ಕಿದೆ. ಸವಾಲುಗಳನ್ನು ನಿಭಾಯಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಇದೆ. ಯಾರೋ ಹಾದಿ ಬೀದಿಯಲ್ಲಿ ನಿಂತು ಏನೇನೋ ಹೇಳಿಕೆ ನೀಡಬಾರದು. ಯಾರ ಯೋಗ್ಯತೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಪಕ್ಷದ ಉಪಾಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವ ಹೋರಾಟವನ್ನೂ ದಿಕ್ಕುತಪ್ಪಿಸುವ ಕೆಲಸ ಮಾಡಿಲ್ಲ. ಅದು ನನಗೆ ಸಂಬಂಧಪಟ್ಟ ವಿಚಾರವೂ ಅಲ್ಲ. ಯಡಿಯೂರಪ್ಪ ಅವರು ಯಾವ ಸಮುದಾಯವನ್ನೂ ಒಡೆಯುವುದಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸುವ ಶಕ್ತಿ, ರಾಜಕೀಯ ಅನುಭವ ಅವರಿಗೆ ಇದೆ ಎಂದರು.
ಮೀಸಲಾತಿ ಹೋರಾಟಗಳು ರಾಜಕೀಯ ಲಾಭಕ್ಕೆ ಬಳಕೆಯಾಗುತ್ತಿವೆ. ಸ್ವಾಮೀಜಿಗಳು ಮೀಸಲಾತಿ ಹೋರಾಟ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ. ತಮ್ಮ ಸಮುದಾಯಗಳ ಪರವಾಗಿ ಹೋರಾಟ ಮಾಡುವುದು ಸರಿಯಾಗಿಯೇ ಇದೆ. ಆದರೆ ಕೆಲವರು ಮೀಸಲಾತಿ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.