ಮೈಸೂರು: ಕಾಂಗ್ರೆಸ್‌ನ ಆಳಾಗಿ ದೇವನೂರು ಮಹಾದೇವ ಬರೆದಿರುವ 'ಆರ್ಎಸ್ಎಸ್ ಆಳ-ಅಗಲ' ಕೃತಿಯಲ್ಲ, ಅದೊಂದು ವಿಕೃತಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. 'ಕುಸುಮ ಬಾಲೆ'ಯ ನಂತರ ದೇವನೂರು ಒಂದಿಷ್ಟು ಸೃಜನಶೀಲತೆ ಉಳಿಸಿಕೊಂಡಿದ್ದಾರೆ ಎಂದುಕೊಂಡಿದ್ದೆ. ಆದರೆ, ಆರ್ಎಸ್ಎಸ್ ಕುರಿತು ಬರೆಯಲು ಹೋಗಿ ತಮ್ಮ ಘನತೆ ಕಳೆದುಕೊಂಡಿದ್ದಾರೆ ಎಂದರು. ಜೊತೆಗೆ, ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತರಾಗಿ ಕೃತಿ ಬರೆದಂತಿದೆ ಎಂದು ವ್ಯಂಗ್ಯವಾಡಿದರು.
ಚತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಇದರಲ್ಲಿ ಒಂದು ಧರ್ಮ, ಒಬ್ಬ ನಾಯಕ, ಒಂದು ದೇಶವನ್ನು ಆರ್.ಎಸ್.ಎಸ್ ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ. ಇದನ್ನು ನಾನು ಸಹ ಓದಿದ್ದೇನೆ. ಚತುರ್ವರ್ಣ ಪದ್ಧತಿ ಎಲ್ಲಾ ಧರ್ಮದಲ್ಲೂ ಇದೆ. ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ಸಾಹಿತಿ ಮಹಾದೇವ ಯಾಕೆ ಮಾತನಾಡುತ್ತಿಲ್ಲ?. ಚತುರ್ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿ ಇಲ್ಲ, ಕ್ರಿಶ್ಚಿಯನ್, ಇಸ್ಲಾಮಿಕ್ ಧರ್ಮದಲ್ಲೂ ಇದೆ ಎಂದು ತಿಳಿಸಿದರು.