ಮೈಸೂರು:ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುವ ಮುನ್ನ ಸದನದ ಜಂಟಿ ಸಮಿತಿ ರಚಿಸಿ, ಅಲ್ಲಿ ವಿಸ್ತೃತ ಚರ್ಚೆಯಾದ ನಂತರ ಕಾಯ್ದೆಯನ್ನ ಮಂಡನೆ ಮಾಡಬೇಕಿತ್ತು ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದರು.
'ಈಟಿವಿ ಭಾರತ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ಮಾಡದೇ, ಮಠಾಧೀಶರು, ಹಾಗೂ ಧಾರ್ಮಿಕ ಮುಖಂಡರ ಜತೆ ಚರ್ಚೆ ಮಾಡದೇ ಕಾಯ್ದೆ ಮಂಡನೆ ಮಾಡಿರುವುದು ಸರಿಯಲ್ಲ. ವಿಧೇಯಕವನ್ನ ಕಾನೂನು ಮಾಡುವ ಮುನ್ನ ಸದನದ ಜಂಟಿ ಸಮಿತಿ ನೇಮಿಸಿ ಅದರ ಅಭಿಪ್ರಾಯ ಪಡೆದು ಮಂಡನೆ ಮಾಡಬೇಕಿತ್ತು. ಆತುರಾತುರವಾಗಿ ಮಂಡನೆ ಮಾಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ನವರು ನಾಟಕವಾಡುತ್ತಿದ್ದಾರೆ. ಅವರು ಮತಾಂತರ ಕಾಯ್ದೆ ಮಂಡನೆ ಮಾಡುವಾಗ ಸದನದ ಹೊರಗೆ ಹರಟೆ ಹೊಡೆಯುತ್ತಿದ್ದು, ಕಾಯ್ದೆ ಮಂಡನೆಯಾದ ಮೇಲೆ ವೀರಾವೇಷದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರದ್ದು ಇಬ್ಬಂದಿ ತನ ಎಂದು ಟೀಕಿಸಿದರು.
ಮತಾಂತರ ನಿಷೇಧ ಕಾಯ್ದೆಗೆ ಕಾನೂನು ಬೆಂಬಲ ಸಿಗುವುದಿಲ್ಲ. ಸುಪ್ರೀಂಕೋರ್ಟ್ಗೆ ಹೋದರೆ ಈ ಕೇಸ್ ನಿಲ್ಲುವುದಿಲ್ಲ, ಬಿದ್ದು ಹೋಗುತ್ತದೆ. ಈ ಕಾಯ್ದೆ ತಂದ ಬೇರೆ ಬೇರೆ ರಾಜ್ಯಗಳ ಕ್ರಮಕ್ಕೆ ಸುಪ್ರೀಂಕೋರ್ಟ್ನಲ್ಲಿ ಸೋಲಾಗಿದೆ ಎಂದರು.