ಮೈಸೂರು:ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಆದ್ದರಿಂದ ನಾನು ಬಿಜೆಪಿ ಬಿಡಬೇಕಾಯಿತು ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್. ವಿಜಯ್ ಶಂಕರ್ ಹೇಳಿಕೆ ನೀಡಿದ್ದಾರೆ.
ಅವರು ಇಂದು ನಾಮಪತ್ರ ಸಲ್ಲಿಸುವ ಮುಂಚೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದರು. ನಂತರ ಈಟಿವಿ ಭಾರತ್ ಜೊತೆ ಮಾತನಾಡಿ, ಬಿಜೆಪಿ ಹಿಂದುಳಿದ ವರ್ಗಗಳಿಗೆ ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ಅನ್ನು ನೀಡಿಲ್ಲ. ಅವರು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎನ್ನುತ್ತಾರೆ. ನಿಜಕ್ಕೂ ಅಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ ಎಂದು ದೂರಿದರು.
ರಾಷ್ಟ್ರದಲ್ಲಿ ಮೋದಿ ಅಲೆ ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಅಭ್ಯರ್ಥಿಗಳ ಪರವಾಗಿ ಜನ ಮತ ಹಾಕುತ್ತಾರೊ ಅವರೇ ಹುಲಿಗಳಾಗುತ್ತಾರೆ ಎಂದು ವಿಜಯಶಂಕರ್ ಹೇಳಿದರು.
ಮೈಸೂರಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಸಮನ್ವಯತೆಯ ಕೊರತೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ, ಈ ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಎರಡು ಪ್ರಬಲ ಪಕ್ಷಗಳಾಗಿದ್ದು, ಸದಾ ಒಬ್ಬರನ್ನೊಬ್ಬರು ವಿರೋಧಿಸುತ್ತ ಬಂದಿರುವುದರಿಂದ ಇದು ಸಹಜ. ಆದರೆ ನಮ್ಮಲ್ಲಿ ಹೊಂದಾಣಿಕೆ ಆಗಿರುವುದರಿಂದ ಮುಂದಿನ ದಿನಗಳಲ್ಲೂ ಒಟ್ಟಾಗಿ ಹೋಗುತ್ತೇವೆ ಎಂದರು.