ಮೈಸೂರು: ರವಿಕುಮಾರ್ ಸಮರ್ಥ್ (50*) ಅರ್ಧಶತಕ ಮತ್ತು ಅಭಿನವ್ ಮನೋಹರ್ (42*) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಬಿಜಾಪುರ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ ಗೆಲುವು ದಾಖಲಿಸಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಬುಲ್ಸ್ ನೀಡಿದ್ದ 135 ರನ್‌ಗಳ ಸವಾಲವನ್ನು ಬೆನ್ನಟ್ಟಿದ್ದ ಬೆಳಗಾವಿ ಪ್ಯಾಂಥರ್ಸ್ 3 ವಿಕೆಟ್ ಕಳೆದುಕೊಂಡು ಇನ್ನೂ 14 ಎಸೆತಗಳನ್ನು ಉಳಿಸಿ ಗೆಲುವಿನ ದಡ ಸೇರಿತು. ಪ್ಯಾಂಥರ್ಸ್ ಕೂಡ ಆರಂಭದಲ್ಲಿ ಮಹತ್ವದ ಎರಡು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ತಂದು ನಿಲ್ಲಿಸಿತ್ತು.
ಆದರೆ, ರವಿಕುಮಾರ್ ಸಮರ್ಥ್ ಮತ್ತು ದಿಕ್ಷಾಂಶು ನೇಗಿ (32) ಅವರು ಉತ್ತಮ ಜತೆಯಾಟದ ಮೂಲಕ ಪಂದ್ಯವನ್ನು ಜಯದ ಹೊಸ್ತಿಲಿಗೆ ತಂದರು. ರವಿಕುಮಾರ್ ಸಮರ್ಥ್ 45 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ಅಭಿನವ್ ಮನೋಹರ್ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42ರನ್ ಗಳಿಸಿದರು. ಬುಲ್ಸ್ ಪರ ಎಂ.ಜಿ.ನವೀನ್ 2ವಿಕೆಟ್ ಕಿತ್ತಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಬಿಜಾಪುರ ಬುಲ್ಸ್ ಕೇವಲ 135 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು. ಬುಲ್ಸ್ ಪರ ನಾಯಕ ಭರತ್ ಚಿಪ್ಲಿ (33), ಎನ್.ಪಿ.ಭರತ್ (35*) ಹೊರತುಪಡಿಸಿದರೆ ಇನ್ನುಳಿದ ಆಟಗಾರರು ರನ್ ಗಳಿಸುವಲ್ಲಿ ವಿಫಲರಾದರು. ನವೀನ್ (3), ರಾಜು ಭಟ್ಕಳ್ (6), ಚಿರಂಜೀವಿ (12) ಹಾಗೂ ಸುನಿಲ್ ರಾಜ (18) ಅಲ್ಪಮೊತ್ತಕ್ಕೆ ಕುಸಿದರು.
ಪ್ಯಾಂಥರ್ಸ್ ಪರ ಅವಿನಾಶ್, ಶುಭಂಗ್ ಹೆಗ್ಡೆ, ದರ್ಶನ್ ಎಂ.ಬಿ ಅವರು ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ. ಮನೀಶ್ ಪಾಂಡೆ ಅವರ ಅನುಪಸ್ಥಿತಿಯಲ್ಲಿ ಮಿರ್ ಕೌನೇನ್ ಅಬ್ಬಾಸ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದ್ದರು. ಒಂದು ಪಂದ್ಯದಲ್ಲಿ ಗೆದ್ದಿರುವ ಬಿಜಾಪುರ ಬುಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.