ಮೈಸೂರು:ಅಂಬರೀಶ್ ಅವರು ರಾಜಕೀಯದಲ್ಲಿ ಸೇವೆ ಸಲ್ಲಿಸುವಾಗ ಈ ಪಕ್ಷೇತರ ಅಭ್ಯರ್ಥಿ ಎಲ್ಲಿ ಹೋಗಿದ್ರು? ಅಂಬರೀಶ್ ನಿಧನರಾದ ನಂತರ ಇವರಿಗೆ ರಾಜಕೀಯ ಆಸೆ ಬಂದಿದೆ ಎಂದು ಸುಮಲತಾರ ಹೆಸರು ಹೇಳದೆ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿನಿಮಾ ಕ್ರೇಜ್ ಇರುವ ಯುವಕರು ಪಕ್ಷೇತರ ಅಭ್ಯರ್ಥಿ ಪರ ಘೋಷಣೆ ಕೂಗುತ್ತಿದ್ದಾರೆ. ಸಿನಿಮಾ ಹುಚ್ಚಿನಿಂದ ಹೀಗಾಡುತ್ತಿದ್ದಾರೆ ಅಷ್ಟೆ. ಸಿನಿಮಾ ಬೇರೆ, ರಾಜಕೀಯ ಬೇರೆ. ಮುಂದೊಂದು ದಿನ ಈ ಸತ್ಯ ಅವರಿಗೆ ಗೊತ್ತಾಗಲಿದೆ ಎಂದರು.
ಸುಮಲತಾ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನನಗೆ 30 ವರ್ಷಗಳ ರಾಜಕೀಯ ಅನುಭವವಿದ್ದು, ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ, ಈ ರೀತಿಯ ರಾಜಕೀಯ ನೋಡಿಲ್ಲ. ಚುನಾವಣೆ ಆರೋಗ್ಯಕರವಾಗಿರಬೇಕು. ಆದರೆ ಪ್ರತಿ ಹಂತದಲ್ಲೂ ತಪ್ಪು ಕಂಡು ಹಿಡಿಯುವ, ಸುಳ್ಳು ಆರೋಪ ಮಾಡುವುದೇ ಅವರ ಕಾರ್ಯವಾಗಿದೆ. ನಿಖಿಲ್ ವಯಸ್ಸಿನಲ್ಲಿ ಚಿಕ್ಕವನಾದರೂ, ಅಭಿವೃದ್ಧಿಯ ಬಗ್ಗೆ ಬದ್ಧತೆ, ಪ್ರಬುದ್ಧತೆಯಿದೆ ಎಂದರು.
ನಿಖಿಲ್‌ಗೆ ವಿಧೇಯತೆ, ವಿನಯತೆ, ಮಹಿಳೆಯರು, ಹಿರಿಯರ ಕಂಡರೆ ಗೌರವವಿದೆ. ಹಾಗಾಗಿ, ನಿಖಿಲ್ ಸಂಸದನಾಗಲು ಅರ್ಹನಾಗಿದ್ದಾನೆ. ಮೈತ್ರಿ ಧರ್ಮವನ್ನು ಪಾಲಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲರೂ ಬೆಂಬಲಿಸಿ, ಗೆಲ್ಲಿಸಬೇಕಿದೆ. ಮಣ್ಣಿನ ಮಗ ನಿಖಿಲ್‌ಗೆ ಮಂಡ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಿಖಿಲ್ ವಿರುದ್ಧ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಲವು ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ , ನಟನೆಯಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಇನ್ನೊಂದು ಮುಖ ನೋಡಿಲ್ಲ ಎಂದು ಹೇಳಿದ್ದಾರೆ. ಅದೇನೆಂದು ತೋರಿಸಲಿ ಎಂದು ಟೀಕಿಸಿದರು.