ಮೈಸೂರು: ದಲ್ಲಾಳಿಗಳಿಂದ ವಂಚನೆಯ ತಪ್ಪಿಸಲು ಹಾಗೂ ಲಾಭ ನೇರವಾಗಿ ಸಾಗಾಣಿಕೆದಾರರಿಗೆ ಸಿಗಲು ಕುರಿ ಮತ್ತು ಮೇಕೆ ಮಾರಾಟಕ್ಕೆ ಆಂಡ್ರಾಯ್ಡ್ ಆ್ಯಪ್ನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಿದೆ.
ಕುರಿ ಮತ್ತು ಮೇಕೆಗಳನ್ನು ಮಾರಾಟ ಮಾಡುವ ರೈತರು ಮತ್ತು ಸಾಗಣಿಕೆದಾರರ ಲಾಭಾಂಶ ಸಂತೆಗಳಲ್ಲಿ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಇದರಿಂದ ನೇರವಾಗಿ ರೈತರಿಗೇ ವಂಚನೆ ಆಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಭಾರತದಲ್ಲೇ ಮೊದಲ ಬಾರಿಗೆ ಕುರಿ ಮತ್ತೆ ಮೇಕೆ ಮಾರಾಟಕ್ಕೆ ಈ ಆ್ಯಪ್ ಕಂಡು ಹಿಡಿದಿದೆ.
ಸರ್ಕಾರದ ನಿಗಮವು ಅಭಿವೃದ್ಧಿ ಪಡಿಸಿದ ಈ ಆ್ಯಪ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶ್ಲಾಘಿಸಿದ್ದಾರೆ. ಈ ಆ್ಯಪ್ನ ಬಗ್ಗೆ ರೈತರಿಗೆ ಮತ್ತು ಸಾಕಾಣಿಕೆ ಮಾಡುವವರಿಗೆ ಅರಿವು ಮೂಡಿಸಲು ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದು, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?. ಇದರ ಅನುಕೂಲ ಏನು?, ರೈತರು ಯಾವ ರೀತಿ ಬಳಸಬೇಕು ಎಂಬ ಬಗ್ಗೆ ನಿಗಮದ ಸಹಾಯಕ ನಿರ್ದೇಶಕ ಡಾ. ಪೂಣಾನಂದ ಅವರು 'ಈಟಿವಿ ಭಾರತ'ಕ್ಕೆ ನೀಡಿರುವ ಕಿರು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಎನ್ಇಎಂಎಲ್ ಆ್ಯಪ್ನ ಕಾರ್ಯ ಚಟುವಟಿಕೆ:ಕುರಿಗಾರ ಮತ್ತು ಗ್ರಾಹಕರ ನಡುವಿನ ದಲ್ಲಾಳಿಗಳ ಹಾವಳಿ ತಪ್ಪಿಸುವುದು, ನ್ಯಾಯಯುತ ಬೆಲೆ ಕುರಿಗಾಯಿಗೆ ದೊರೆಯುವಂತೆ ಮಾಡುವುದೇ ಈ ಎನ್ಇಎಂಎಲ್ ಆ್ಯಪ್ನ ಉದ್ದೇಶ. ಇಂದಿನ ವಿದ್ಯಮಾನದಲ್ಲಿ ಪತ್ರಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದು, ಡಿಜಿಟಲ್ಗೆ ಮೊರೆ ಹೋಗಿದ್ದಾರೆ. ಅದನ್ನು ಬಳಸಿಕೊಂಡು ಡಿಜಿಟಲ್ ಮೂಲಕ ನ್ಯಾಯಯುತ ಬೆಲೆ ಮತ್ತು ಲಾಭಾಂಶವನ್ನು ಕುರಿ ಸಾಕಾಣಿಕೆ ಮಾಡುವವರಿಗೆ ಕಲ್ಪಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಪೂರ್ಣಾನಂದ.