ಮೈಸೂರು: ಲಾಡ್ಜ್ ಹಾಗೂ ಪ್ರವಾಸಿ ತಾಣಗಳಲ್ಲಿ ಬರುವ ಪ್ರವಾಸಿಗರ ಮೇಲೂ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ದುಷ್ಕೃತ್ಯಗಳು ನಡೆಯದಂತೆ ಅಲರ್ಟ್ ಮಾಡಲಾಗಿದೆ. ಲಾಡ್ಜ್ ಹಾಗೂ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾ ಇಡುವಂತೆ, ಲಾಡ್ಜ್ ಮಾಲೀಕರು ನಿತ್ಯ ಬರುವ ಪ್ರವಾಸಿಗರ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ ಎಂದರು.
ಮನೆ ಬಾಡಿಗೆ ನೀಡುವ ಮುನ್ನ ಮನೆ ಮಾಲೀಕರು, ಬಾಡಿಗೆ ಪಡೆಯುವವರ ನಿಖರ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ:ವಿಶಾಲಾ ಗಾಣಿಗ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಸಿಬ್ಬಂದಿಗೆ ನಗದು ಪುರಸ್ಕಾರ ನೀಡಿ ಅಭಿನಂದನೆ
ನಿರ್ಜನ ಪ್ರದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಪ್ರತಿಕ್ರಿಯೆ ನೀಡಿ, ಕೆಲವು ಪ್ರದೇಶಗಳನ್ನು ಗುರುತು ಮಾಡಿ ಹೆಚ್ಚಿನ ಗಸ್ತು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕೂಡ ಅಲರ್ಟ್ ಆಗಿರಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆಗೆ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿ, ಲಕ್ಷ್ಮೀಪುರಂ ಠಾಣೆಗೆ ವಾಣಿಜ್ಯ ತೆರಿಗೆ ಕಚೇರಿಗೆ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಎರಡು ಬಾರಿ ತಪಾಸಣೆ ಮಾಡಲಾಗಿದೆ. ಇದೊಂದು ಅನಾಮಧೇಯ ಪತ್ರವಾಗಿದ್ದು, ಇದರ ಬಗ್ಗೆಯು ತನಿಖೆ ನಡೆಯುತ್ತಿದೆ ಎಂದು ಹೇಳಿದರು.