ಮೈಸೂರು: ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ಸ್ನೇಹಿತರ ನಡುವೆ ಉಂಟಾದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಅಂಗಟಹಳ್ಳಿಯ ಕುಚೇಲೇಗೌಡರ ಪುತ್ರ ಬೀರೇಶ್ (23) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಕುಟ್ಟಿ ಜಿಮ್‌ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಏನಿದು ಪ್ರಕರಣ: ನಿತಿನ್ ಬಗ್ಗೆ ಕೆಟ್ಟದಾಗಿ ಇನ್ಸ್ಟಾಗ್ರಾಮ್ನಲ್ಲಿ ಬೀರೇಶ್ ಪೋಸ್ಟ್ ಮಾಡಿದ್ದ ಎನ್ನಲಾಗ್ತಿದೆ. ಈ ಸುದ್ದಿ ಜಿಮ್ ಟ್ರೈನರ್ ನಿತಿನ್ಗೆ ತಿಳಿದಿದೆ. ಇದರಿಂದ ಕೋಪಗೊಂಡ ನಿತಿನ್, ತನ್ನ ಸ್ನೇಹಿತ ಮನು ಜೊತೆ ಬೈಕಿನಲ್ಲಿ ಬೀರೇಶ್‌ನನ್ನು ಕರೆದೊಯ್ದಿದ್ದಾರೆ. ಎಪಿಎಂಸಿ ಬಳಿಯ ಬೈಪಾಸ್ ರಸ್ತೆಯಲ್ಲಿ ಈ ಪೋಸ್ಟ್ ಬಗ್ಗೆ ಬೀರೇಶ್ಗೆ ನಿತಿನ್ ಪ್ರಶ್ನಿಸಿದ್ದಾನೆ. ತಾನು ಈ ಪೋಸ್ಟ್ ಮಾಡಿಲ್ಲ ಎಂಬುದು ಬೀರೇಶ್ ವಾದವಾಗಿತ್ತು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.