ಮೈಸೂರು: ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಜೀವಕ್ಕೇ ಕುತ್ತು ಬರುತ್ತೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದಿರುವ ಇದೊಂದು ಘಟನೆ ಉದಾಹರಣೆಯಾಗಿದೆ.
ರಾಸಲೀಲೆಯ ಸೆಲ್ಫಿ ವಿಡಿಯೋವನ್ನು ಪ್ರಿಯತಮೆ ತಮಾಷೆಗೆಂದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಪರಿಣಾಮ ಮರ್ಯಾದೆಗೆ ಅಂಜಿದ ಪ್ರಿಯತಮ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಯುವಕನೊಬ್ಬ ಇದೇ ಕಾರಣಕ್ಕೆ ಶನಿವಾರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ದುರಂತವೆಂದರೆ, ಈತನ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಖಾಸಗಿ ಕಾರ್ಖಾನೆಯ ಉದ್ಯೋಗಿಯಾಗಿದ್ದ ಈತ, ಪಕ್ಕದ ಗ್ರಾಮದ ಯುವತಿಯನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಜತೆ ಸರಸದಲ್ಲಿ ತೊಡಗಿದ್ದನು. ಅಲ್ಲದೆ, ಇದನ್ನೆಲ್ಲ ಸೆಲ್ಫಿ ಮೂಲಕ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ವಿಡಿಯೋಗಳನ್ನು ತಮಾಷೆಗೆಂದು ಪ್ರಿಯತಮೆ ಫೇಸ್ಬುಕ್ಗೆ ಅಪ್ಲೋಡ್ ಮಾಡಿ, ಸ್ನೇಹಿತರಿಗೆ ಟ್ಯಾಕ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮರ್ಯಾದೆಗೆ ಅಂಜಿದ ಯುವಕ ಮನನೊಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿದ ಯುವತಿ ಘಟನೆ ನಡೆದಾಗಿನಿಂದ ನಾಪತ್ತೆ ಆಗಿದ್ದಾಳೆ. ಈ ಸಂಬಂಧ ಯುವಕನ ಮನೆಯವರು ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.